ದಾವಣಗೆರೆ: ಸಮಾಜದಲ್ಲಿ ಎಲ್ಲಾ ಸಮುದಾಯದೊಂದಿಗೆ ಶಾಂತಿ, ಸೌಹಾರ್ದತೆ ಯೊಂದಿಗೆ ಸಹಬಾಳ್ವೆ ಮಾಡಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾಪ್ರಶಾಂತ್ ತಿಳಿಸಿದರು.
ಅವರು ಬುಧವಾರ ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ನಿವಾರಣೆ ಕುರಿತು ಏರ್ಪಡಿಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಸಮುದಾಯದವರು ಶಾಂತಿ ಸೌಹರ್ದತೆಯಿಂದ ಇರಬೇಕು ಎಂಬುದು ನಮ್ಮ ಭಾವನೆ.
ನೀವು ಕೂಡ ಕಾನೂನಿನ ಬಗ್ಗೆ ತಿಳಿದುಕೊಂಡು ನಮ್ಮೊಂದಿಗೆ ನೀವು ಸಹಕರಿಸಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ದುಶ್ಚಟಗಳಿಂದ ದೂರ ಇದ್ದಾಗ ಮನೆ, ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು .ನಮ್ಮ ಸಮಾಜ ಸಧೃಡ ಹಾಗೂ ವಿದ್ಯಾವಂತ ಸಮಾಜವಾಗಬೇಕು ಎಂಬುವುದು ನಮ್ಮ ಆಶಯ, ಅದಕ್ಕೆ ನಮ್ಮ ಪೊಲೀಸ್ ಅಧಿಕಾರಿಗಳು ಹಗಲು ರಾತ್ರಿ ಕೆಲಸವನ್ನು ಮಾಡಿತ್ತಿದ್ದಾರೆ. ಅದಕ್ಕೆ ನಿಮ್ಮ ಬೆಂಬಲ ನಮಗೆ ನೀಡಬೇಕು, ಯಾವುದೇ ಸಮಸ್ಯೆ, ಕುಂದುಕೊರತೆಗಳಿದ್ದಲ್ಲಿ ಅದನ್ನು ಕಾನೂನಾತ್ಮಕವಾಗಿ ಪರಿಹರಿಸಲಾಗುತ್ತದೆ.
ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರು ಸಹ ಮಾಡಬಾರದು ಎಂದು ತಿಳಿಸಿದರು.ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ ಸಂತೋಷ ಜಿಲ್ಲಾ ವಿಶೇಷ ವಿಭಾಗ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್, ಅಬಕಾರಿ ಡಿ.ಎಸ್.ಪಿ ರವಿ ಮರಿಗೌಡರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್ ಪ್ರಮುತೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.