ಹೊಸಕೋಟೆ: ಇಂದು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ರಂಗಕಲೆಯನ್ನು ಜೀವಂತವಾಗಿಸಲು ಜನಪದರು ಸಾಂಸ್ಕøತಿಕ ವೇದಿಕೆಯು ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದು ಹಿರಿಯ ರಂಗಕರ್ಮಿ ಡಾ: ಜಗದೀಶ್ಗೌಡ ಹೇಳಿದರು.
ಅವರು ಸಮೀಪದ ನಿಂಬೆಕಾಯಿಪುರದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಯುವಕರಲ್ಲಿ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸುವುದರೊಂದಿಗೆ ಅಗತ್ಯ ಅಭಿನಯದ ಬಗ್ಗೆ ತರಬೇತಿ ಸಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ನೈಜ ಅಭಿನಯದ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವಲ್ಲಿ ರಂಗಕಲೆಯು ಪ್ರಮುಖ ಪಾತ್ರ ವಹಿಸುತ್ತಿದೆ. ನಾಟಕ ಪ್ರದರ್ಶನಗಳನ್ನು ವೀಕ್ಷಿಸುವ ಮೂಲಕ ಕಲಾವಿದರನ್ನು ಸಹ ಪ್ರೋತ್ಸಾಹಿಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತಗೊಂಡಿದ್ದ ರಂಗ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿಕೊಂಡು ನಾಡಿನ ಖ್ಯಾತ ಕಲಾ ಸಂಸ್ಥೆಗಳಿಂದ ಅಂತರಾಷ್ಟ್ರೀಯ ಮಟ್ಟದ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ.
ಇಂದು ಜನರಲ್ಲಿ ದೂರದರ್ಶನದ ವೀಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾಗ್ಯೂ ರಂಗಕಲೆಗೆ ಧಕ್ಕೆ ಉಂಟಾಗುವುದನ್ನು ತಡೆಗಟ್ಟಬೇಕಾಗಿದೆ ಎಂದರು.
ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಮಾತನಾಡಿ ಹಿಂದಿನಿಂದಲೂ ಬಹಳಷ್ಟು ಖ್ಯಾತ ಚಲನಚಿತ್ರ ನಟರು ಮೂಲತ: ರಂಗಭೂಮಿ ಕಲಾವಿದರಾಗಿ ಯಶಸ್ಸು ಸಾಧಿಸಿದ್ದಾರೆ. ಯುವಕರಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವುಗಳ ಪ್ರದರ್ಶನಕ್ಕೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಜನಪದರು ಸಂಸ್ಥೆಯು ಕಾರ್ಯನಿರತವಾಗಿರುವುದು ಪ್ರಶಂಸನೀಯ.
ಸರಕಾರ ಸಹ ಹಿರಿಯ ರಂಗಕಲಾವಿದರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಸ್ವಾವಲಂಬಿಗಳಾಗಲು ಸೂಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ್ದು ಅತ್ಯವಶ್ಯವಾಗಿದೆ ಎಂದರು.ಜನಪದರು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಕಾಟಂನಲ್ಲೂರ್ ಪಾಪಣ್ಣನವರ ಮಾತನಾಡಿ ಸಮಾನ ಮನಸ್ಕರಿಂದ ಕೇವಲ ಹವ್ಯಾಸ ರಂಗತಂಡವಾಗಿ ಸ್ಥಾಪನೆಯಾದ ಸಂಸ್ಥೆಯು ಇಂದು ಪ್ರಖ್ಯಾತ ತಂಡಗಳಲ್ಲಿ ಒಂದಾಗಿದೆ.
ಪ್ರತಿ ತಿಂಗಳ ಎರಡನೇ ಶನಿವಾರಗಳಂದು ದಾನಿಗಳ ಸಹಯೋಗ, ಸಂಸ್ಥೆಯ ಸದಸ್ಯರ ಸಹಕಾರದೊಂದಿಗೆ ಖ್ಯಾತ ರಂಗ ತಂಡಗಳ ಕಲಾವಿದರಿಂದ ಅತ್ಯುತ್ತಮವಾದ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಪ್ರಶಂಸಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ರಂಗಕರ್ಮಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಜಗದೀಶ್ ಕೆಂಗನಾಳ್ ಹಾಗೂ ಅವರ ಧರ್ಮಪತ್ನಿ ಗಿರಿಜಮ್ಮರವರ ಗೌರವಾರ್ಥ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.ನಗಾರಿ ಭಾರಿಸುವುದರ ಮೂಲಕ ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಮತ್ತು ಡಾ: ಜಗದೀಶ್ ಗೌಡರವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಡಾ. ಜಗದೀಶ್ ಗೌಡರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕನ್ನಡ ವೃತ್ತಿ ರಂಗಭೂಮಿ ಬೆಳದು ಬಂದ ಹಾದಿಯನ್ನು ವಿವರಿಸಿದರು.
ರಾಮಚಂದ್ರ ಮೂರ್ತಿಯವರು ರಾಮಾಯಣದ ರಾವಣನ ಪಾತ್ರವನ್ನು, , ಬೋದನಹೊಸಹಳ್ಳಿ ನಾಗೇಶ್, ಶ್ಯಾಮಲ ನಾಗೇಶ್ರವರು ಬಾಲಗುರುಮೂರ್ತಿಯವರ ರಚನೆಯ ಬುಡ್ಗನಾದ ನಾಟಕದ ದೃಶ್ಯಗಳನ್ನು ಅಭಿನಯಿಸಿ ಪ್ರದರ್ಶಿಸಿದರು. ಆಶಾ, ಲಿಖಿತ ಶಿವಕುಮಾರ್ ಭಾವಗೀತೆಗಳನ್ನು ಹಾಡಿದರು. ಕುಮಾರಿ ಆರಾಧ್ಯ ಬೆಳ್ತೂರು ವಚನವನ್ನು ಹಾಡಿ ಸುಶ್ರಾವ್ಯವಾಗಿ ಕೊಳಲನ್ನು ನುಡಿಸುವುದರ ಮೂಲಕ, ವರ್ಣಿತ್ ಸಾಹಸ ಪ್ರದರ್ಶನ ಮಾಡಿ ಎಲ್ಲರ ಗಮನವನ್ನು ಸೆಳೆದರು. ಮುನಿರಾಜು ಹಾಗೂ ಚಲಪತಿಯವರು ರಂಗೀತೆಗಳನ್ನು ಹಾಡಿದರು. ವೇದಿಕೆಯ ಪದಾಧಿಕಾರಿಗಳಾದ ಶಿವಕುಮಾರ್, ಸಿದ್ದೇಶ್ವರ ದೊಡ್ಡಬನಹಳ್ಳಿ, ಎಂ. ಸುರೇಶ್ ಇನ್ನಿತರರು ಭಾಗವಹಿಸಿದ್ದರು.