ಬೆಂಗಳೂರು: ಜನಹಿತ ಪತ್ರಿಕೋದ್ಯಮವು ಬಹುತೇಕ ಪತ್ರಕರ್ತರಿಗೆ ಪ್ರಸ್ತುತ ದಿನಗಳಲ್ಲಿ ನಿಜಕ್ಕೂ ಸವಾಲಾಗುತ್ತಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನೇ ಕೆಲವರು ಪ್ರಶ್ನೆ ಮಾಡತೊಡಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹಿರಿಯ ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಎನ್.ಎಸ್.ಶಂಕರ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಹಮ್ಮಿಕೊಂಡ `ಹಿರಿಯ ಪತ್ರಕರ್ತರಿಗೆ ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮದಲ್ಲಿ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಾವು ಪತ್ರಿಕೋದ್ಯಮ ಪ್ರವೇಶ ಮಾಡಿದ ಕಾಲಘಟ್ಟವೇ ಬೇರೆ. ಆಗಿನ ಸೈದ್ಧಾಂತಿಕ ನಿಲುವುಗಳು ವೃತ್ತಿಪರವಾಗಿದ್ದವು.
ಆ ಕಾರಣಕ್ಕಾಗಿಯೇ ಜನಪರ ಪತ್ರಿಕೋದ್ಯಮವನ್ನು ಮಾಡಲು ಸಾಧ್ಯವಾಯಿತು. ಎಲ್ಲರನ್ನು ಪ್ರಶ್ನಿಸುವಂತ ಧೈರ್ಯವನ್ನು ಎಂಬತ್ತರ ದಶಕದ ಪತ್ರಿಕೋದ್ಯಮ ಹುಟ್ಟು ಹಾಕಿದ್ದು ಮಹತ್ವದ ಬದಲಾವಣೆ ಎಂದರು.ಕನ್ನಡ ಪತ್ರಿಕೋದ್ಯಮದ ಹಿರಿಯ ತಲೆಮಾರಿನ ಲಂಕೇಶ್, ವಡ್ಡರ್ಸೆ ರಘುರಾಮ್ ಶೆಟ್ಟಿಯಂತವರ ಗರಡಿಯಲ್ಲಿ ತಾನು ಪಳಗಿದ್ದ ಕಾರಣ, ಹೋರಾಟ ಮನೋಭಾವವನ್ನೂ ರೂಢಿಸಿಕೊಳ್ಳಲು ಸಾಧ್ಯ ವಾಗಿದೆ ಎಂದರು.
ಈಗೀಗ ಹೆಚ್ಚಿನ ಟಿ.ವಿ. ಮಾಧ್ಯ ಮಗಳು ಟಿ.ಆರ್.ಪಿ. ಓಟದ ಹಿಂದೆ ಬೆನ್ನು ಹತ್ತಿ, ಸಿನಿಮಾ ದೃಶ್ಯಗಳಂತೆ ಪೂರ್ವಯೋಚಿತ ವರದಿ- ದೃಶ್ಯವನ್ನೊದಗಿಸುತ್ತದೆ ಎಂದೂ ಅವರು ಹೇಳಿದರು.ಪತ್ರಕರ್ತರ ಪರವಾದ ಹೋರಾಟಕ್ಕೆಂದು ಆರಂಭವಾದ ಕಾರ್ಯನಿರತ ಪತ್ರಕರ್ತರ ಸಂಘವು ವೃತ್ತಿಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದರು.
ಕೆಯುಡಬ್ಲ್ಯೂಜೆ ಸೇವೆ ಅನನ್ಯ: ಪತ್ರಕರ್ತರ ಹಕ್ಕಿಗೋಸ್ಕರ ಹೋರಡಲು ಹುಟ್ಟಿಕೊಂಡ ಕೆಯುಡಬ್ಲ್ಯೂಜೆ ಅದಕ್ಕೆ ಮಾತ್ರ ಸೀಮಿತವಾಗದೆ ವಾರ್ಷಿಕ ಪತ್ರಕರ್ತರ ಸಮ್ಮೇಳನಗಳು, ಪ್ರಶಸ್ತಿ ಗಳು ಹಾಗೂ ವೃತ್ತಿಗೆ ಸಹಾಯವಾಗುವಂತಹ ಅನೇಕ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದೆ. ಎಂದು ಎನ್.ಎಸ್.ಶಂಕರ್ ಹೇಳಿದರು.
ಪತ್ರಕರ್ತರಿಗೆ ಕಷ್ಟಬಂದಾಗ ವೃತ್ತಿಯಲ್ಲಿ ಬೆದರಿಕೆಗಳು ಬಂದಾಗ ಸಂಘ ನೆರವಿಗೆ ಬಂದಿದೆ. ಇಂತಹದೊಂದು ಸಂಸ್ಥೆ ಜೊತೆಯಲ್ಲಿ ಇಲ್ಲದಿದ್ದರೆ ಪತ್ರಕರ್ತರ ಕಷ್ಟವನ್ನು ಊಹೆಮಾಡಿಕೊಳ್ಳಲು ಸಾದ್ಯವಿಲ್ಲ ದ ಪರಿಸ್ಥಿತಿ ನಿರ್ಮಾಣ ವಾಗಿತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರುತಾನು ಕೆ.ಯು.ಡಬ್ಲ್ಯೂ.ಜೆ. ಕುರಿತಂತೆ ಸಾಕ್ಷ್ಯಚಿತ್ರವೊಂದನ್ನು ನಿರ್ದೇಶಿಸಿರುವುದಾಗಿಯೂ ತಮ್ಮ ಅನುಭವವನ್ನು ಎನ್.ಎಸ್.ಶಂಕರ್ ಮಾತುಕತೆಯ ವೇಳೆ ನೆನಪಿಸಿಕೊಂಡರು.
ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತ್ರತ್ವದ ತಂಡ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಮುಂದುವರಿಸಲಿ , ವೃತ್ತಿನಿರತ ಪತ್ರಕರ್ತರಿಗೆ ಕಷ್ಟಗಳು ಬಂದಾಗ ನೆರವುಕೊಡಿಸುವಕೆಲಸ ಮುಂದುವರಿಸಲಿ ಎಂದು ಆಶಿಸಿದರು.ದಂಪತಿಗಳನ್ನು ಅಭಿನಂದಿಸಿ ಮಾತನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಎನ್.ಎಸ್.ಶಂಕರ್ ಅವರು ಮೂರು ದಶಕಗಳ ಕಾಲ ಪತ್ರಿಕೋದ್ಯಮ ಮಾಡಿದ್ದಲ್ಲದೆ,
ಉಲ್ಟಾ ಪಲ್ಟಾ ಚಲನ ಚಿತ್ರದಿಂದ ಜನಪ್ರಿಯತೆ ಗಳಿಸಿದ ಇವರು ಮೂರು ದಶಕಗಳಿಂದ ಪತ್ರಿಕಾರಂಗದಲ್ಲೂ ಕೆಲಸಮಾಡಿ ಅನುಭವ ಹೊಂದಿ ಬಹುಮುಖ ಪ್ರತಿಭೆಯಿಂದ ಕೂಡಿದವರಾಗಿದ್ದಾರೆ ಎಂದರು.ಕಾರ್ಯಕ್ರಮ ದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು. ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು.
ರಾಜ್ಯ ಸಮಿತಿ ಸದಸ್ಯ ಸೋಮಶೇಖರ ಗಾಂಧಿ , ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೇಕಟ್, ಪೋಟೋ ಜರ್ನಲಿಸ್ಟ್ ಶರಣ ಬಸಪ್ಪ, ಪತ್ರಕರ್ತ ರಮಾಕಾಂತ್ ಹಾಜರಿದ್ದರು.ಪತ್ರಿಕೋದ್ಯಮದಿಂದ ಸಿನಿಮಾದತ್ತ ಹೊರಳಿದ್ದ ಎನ್.ಎಸ್.ಶಂಕರ್ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದ ಎನ್.ಎಸ್.ಶಂಕರ್, ಮೈಸೂರು, ಪಾಂಡವಪುರ ಮತ್ತು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದವರು. `ತುಮಕೂರು ಟೈಮ್ಸ್’ ಪತ್ರಿಕೆಯ ಮೂಲಕ ಪತ್ರಿಕಾ ವೃತ್ತಿಗೆ ಪದಾರ್ಪಣೆ ಮಾಡಿದವರು.
ಆ ಬಳಿಕ `ಪ್ರಜಾವಾಣಿ’ಯಲ್ಲಿ ಎರಡು ವರ್ಷ ಉಪ-ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ತಮ್ಮ ಮಾರ್ಗದರ್ಶರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು `ಮುಂಗಾರು’ಪತ್ರಿಕೆಯನ್ನು ಆರಂಭಿಸಿದಾಗ ಅವರ ಜೊತೆಗೂಡಿದರು.ಬಳಿಕ `ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು.
ಮೈಸೂರು ಮೂಲದ ಕಾನೂನು ಪದವೀಧರೆಯಾದ ಉಮಾರಾಣಿ ಅವರನ್ನು ವಿವಾಹವಾದ ಎನ್.ಎಸ್.ಶಂಕರ್ ಅವರ ಏಕೈಕ ಪುತ್ರ ರಾಹುಲ್, ಇದೀಗ ಯೋಗರಾಜ್ ಭಟ್ ಅವರ ಜೊತೆ ಸಹ-ನಿರ್ದೇಶಕರಾಗಿದ್ದಾರೆ.ಪತ್ರಿಕೋದ್ಯಮ ವೃತ್ತಿಗೆ ಕಿರುವಿರಾಮ ನೀಡಿದ್ದ ಎನ್.ಎಸ್.ಶಂಕರ್ ಅವರು, ಮೊದಲು ಕಿರುಚಿತ್ರ, ಬಳಿಕ ಸಿನಿಮಾ ನಿರ್ದೇಶನದತ್ತ ಹೊರಳಿದರು. 1997ರಲ್ಲಿ `ಉಲ್ಟಾ ಪಲ್ಟಾ’ ಚಿತ್ರ ನಿರ್ದೇಶಿಸಿ, ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾದರು.
ಆ ಬಳಿಕ `ರಾಂಗ್ ನಂಬರ್’, `ಜೂಟಾಟ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಅವರು ನಿರ್ದೇಶನ ಮಾಡುತ್ತಿರುವ ಚಿತ್ರವೊಂದರ ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ಸುದ್ದಿ ಟಿ.ವಿ.ಯ ಸಂಪಾದಕೀಯ ಸಲಹೆಗಾರರಾಗಿ ತಾನು ಕಾರ್ಯವೆಸಗಿದ್ದ ಅನುಭವವನ್ನೂ ಅವರು ತಮ್ಮ ಮಾತುಕತೆಯ ವೇಳೆ ಹಂಚಿಕೊಂಡರು.`ಮಾಯಾ ಬಜಾರ್’ `ಆವರಣ’ `ಅರಸು ಯುಗ’ ಸೇರಿದಂತೆ ಹಲವಾರು ಜನಪ್ರಿಯ ಕೃತಿಗಳನ್ನೂ ಅವರು ರಚಿಸಿದ್ದಾರೆ.