“ಲಾಕಪ್ ಡೆತ್”, ” Ak 47 ” ಮಂಡ್ಯ”, “ಹುಬ್ಬಳ್ಳಿ” ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ “ಫೀನಿಕ್ಸ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು. ಎನ್ ಸೋಮೇಶ್ವರ್ ಜ್ಯೋತಿ ಬೆಳಗುವ ಮೂಲಕ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದರು.
ಬೇಬಿ ಕೃಷಿ ಆರಂಭ ಫಲಕ ತೋರಿದರು. ಎ.ಎಂ ಉಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರು. ಆನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು “ಫೀನಿಕ್ಸ್” ಚಿತ್ರದ ಬಗ್ಗೆ ಮಾಹಿತಿ ನೀಡಿದರು.ಇದೊಂದು ಮಹಿಳಾ ಪ್ರಧಾನ ಚಿತ್ರ. ರಿಮೇಕ್ ಚಿತ್ರಗಳಿಗೆ ಬ್ರೇಕ್ ಹಾಕಿ ಸ್ವಮೇಕ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪುತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟ್ ಗೌಡ ಅರ್ಪಿಸುತ್ತಿರುವ ಈ ಚಿತ್ರವನ್ನು ತ್ರಿಶಾ ಪ್ರಕಾಶ್ ಶ್ರೀ ಗುರು ಚಿತ್ರಾಲಯ ಬ್ಯಾನರ್ ನಲ್ಲಿ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಜರ್ಮನ್ ಹಾಗೂ ಆಸ್ಟ್ರೀಯಾ ದಲ್ಲಿ ಚಿತ್ರೀಕರಣ ನಡೆಯಲಿದೆ. ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇದು ನನ್ನ ನಿರ್ದೇಶನದ 49ನೇ ಚಿತ್ರ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದರು.ಚಿತ್ರದ ಶೀರ್ಷಿಕೆ ಕೇಳಿ ನನಗೆ ಈ ಚಿತ್ರದಲ್ಲಿ ನಟಿಸುವ ಆಸೆಯಾಯಿತು. ಕಥೆ ಕೇಳಿದ ಮೇಲಂತೂ ಬಹಳ ಖುಷಿಯಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದರು ನಿಮಿಕಾ ರತ್ನಾಕರ್.
ನಾನು ಈ ಹಿಂದೆ ಓಂಪ್ರಕಾಶ್ ರಾವ್ ಅವರ ನಿರ್ದೇಶನ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಇದು ಮೂರನೇ ಚಿತ್ರ. ಈ ಚಿತ್ರದಲ್ಲೂ ನನ್ನ ಪಾತ್ರ ಚೆನ್ನಾಗಿದೆ ಎಂದರು ಮತ್ತೊಬ್ಬ ನಾಯಕಿ ಕೃತಿಕ ಲೋಗೊ.ನಾನು ಈವರೆಗೂ ತೊಂಭತ್ತು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ಪ್ರಮಖಪಾತ್ರ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರ ನನ್ನದು ಎನ್ನುತ್ತಾರೆ ಭಾಸ್ಕರ್ ಶೆಟ್ಟಿ.
ಚಿತ್ರದಲ್ಲಿ ನಟಿಸುತ್ತಿರುವ ಕಾಕ್ರೋಜ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ವಿತರಕ ವೆಂಕಟ್ ಗೌಡ ಚಿತ್ರಕ್ಕೆ ಶುಭ ಕೋರಿದರು.ನಾನು ಹಾಗೂ ಓಂಪ್ರಕಾಶ್ ರಾವ್ ಮೂವತ್ತು ವರ್ಷದ ಗೆಳೆಯರು. ಓಂಪ್ರಕಾಶ್ ರಾವ್ ನಿರ್ದೆಶನದ ಬಹುತೇಕ ಚಿತ್ರಗಳಿಗೆ ನಾನೇ ಸಂಭಾಷಣೆ ಬರೆದಿದ್ದೇನೆ ಈ ಚಿತ್ರಕ್ಕೂ ಬರೆಯುತ್ತಿದ್ದೇನೆ ಎಂದರು ಎಂ.ಎಸ್ ರಮೇಶ್.
ಸಾಧುಕೋಕಿಲ ಸಂಗೀತ ನಿರ್ದೇಶನ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ವಿಜಯನ್ ಸಾಹಸ ನಿರ್ದೇಶನ ಹಾಗೂ ರಾಮಚಂದ್ರ ಅವರ ನಿರ್ಮಾಣ ನಿರ್ವಹಣೆ “ಫೀನಿಕ್ಸ್” ಚಿತ್ರಕ್ಕಿದೆ.