ವಿಧಾನಪರಿಷತ್ ಸುವರ್ಣಸೌಧಅಭಿವೃದ್ಧಿಶೀಲ ಬೆಂಗಳೂರು ಮಹಾ ನಗರದಲ್ಲಿ ಸಹಜವಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಕಸ ವಿಲೇವಾರಿ ಕೂಡ ತಲೆ ನೋವಾಗಿದೆ. ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಪ್ರಾಯೋಗಿಕ ಯೋಜನೆಯೊಂದರ ಜಾರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರಿಗೆ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದರು. ಸಹೋದರಿ ಭಾರತಿ ಶೆಟ್ಟಿ ಮಂಗಳೂರು ಭಾಗದವರಾಗಿದ್ದರೂ ಬೆಂಗಳೂರು ಅಭಿವೃದ್ಧಿ ಕುರಿತು ಪ್ರಶ್ನಿಸಿರುವುದು ಸಂತೋಷ. ಬೆಂಗಳೂರಿಗೆ ಹೋಲಿಸಿದರೆ ಮಂಗಳೂರು ಸುಂದರ ನಗರ. ಈಗ ಬೆಳಗಾವಿ ಸಹ ಬೆಂಗಳೂರಿನಷ್ಟು ವಿಸ್ತಾರ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನೊಮ್ಮೆ ಸಮೀಕ್ಷೆ ಮಾಡಲು ಸೂಚಿಸಿದ್ದೇನೆ. ಮಹಾನಗರಗಳ ದೊಡ್ಡ ಸಮಸ್ಯೆ ಎಂದರೆ ವಾಹನ ದಟ್ಟಣೆ, ಸಂಚಾರ ದಟ್ಟಣೆ, ಕಸ ವಿಲೇವಾರಿ ಮತ್ತು ಅಪ ರಾಧ ಕೃತ್ಯಗಳು. ನಮ್ಮ ಸರಕಾರ ಈ ವಿಷಯದಲ್ಲಿ ಕಠಿಣ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದರು.
ಈಗಾಗಲೇ ಸಂಚಾರ ದಟ್ಟಣೆ, ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹೈದ್ರಾಬಾದ್, ದೆಹಲಿಗೆ ಹೋಗಿ ನೋಡಿರುವುದಾಗಿ ತಿಳಿಸಿದ ಡಿಸಿಎಂ, ಸುಮಾರು 70 ಸಾವಿರ ಜನರಿಂದ ಸಲಹೆ ಸ್ವೀಕರಿಸಲಾಗಿದೆ. ಆರೋಗ್ಯಪೂರ್ಣ ಬೆಂಗಳೂರು ಮತ್ತು ಹಸಿರು ಬೆಂಗಳೂರು ನಿರ್ಮಾಣಕ್ಕೆ ಏನೇನು ಮಾಡಬೇಕು ಎನ್ನುವ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಬೆಂಗಳೂರು ಈಗ ಉತ್ತರದ ಕಡೆಗೆ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ತುಮಕೂರು ಸೇರಿದಂತೆ ನಾನಾ ಭಾಗಗಳ ವಾಹನಗಳು ಅಧಿಕವಾಗಿರುವುದರಿಂದ ವಾಹನ ದಟ್ಟಣೆ, ಸಂಚಾರ ದಟ್ಟಣೆ ಹೆಚ್ಚಾಗಿದೆ. ಇವುಗಳಿಗೆಲ್ಲ ಕಡಿವಾಣ ಹಾಕಲು ಜನರ-ಜನಪ್ರತಿನಿಧಿಗಳ ಸಲಹ ಮೇರೆಗೆ ಪ್ರಾಯೋಗಿಕ ಕಾರ್ಯಕ್ರಮ ರೂಪಿಸಲು ಸರಕಾರ ಯೋಚಿಸಿದೆ. ಜೊತೆಗೆ ಪ್ರವಾಸೋದ್ಯಮ ತಾಣವಾಗಿ ಬೆಂಗಳೂರಿನ ಅಭಿವೃದ್ಧಿ ಕುರಿತು ಚಿಂತನೆ ನಡೆದಿದೆ ಎಂದರು.
ಸರಗಳ್ಳತನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತಿ ಶೆಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಸಚಿವರು ಮತ್ತು ತಾವು ಸೇರಿ ಈ ಬಗ್ಗೆ ಚಿಂತನೆ ನಡೆಸಿದ್ದೇವೆ. ಜನದಟ್ಟಣೆ ಇರುವಲ್ಲಿ ಸಿಸಿ ಕ್ಯಾಮೆರಾಗಳು, ಪೊಲೀಸ್ ಕಣ್ಗಾವಲು ಹೆಚ್ಚಿಸಿದ್ದೇವೆ ಎಂದು ಡಿಸಿಎಂ ವಿವರಿಸಿದರು. ಡಿಸಿಎಂಗೆ ಧ್ವನಿಗೂಡಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ, ಬೆಂಗಳೂರಿನಾದ್ಯಂತ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ರಸ್ತೆ ಮೇಲೆ ಓಡಾಡುವವರ ವಾಚ್ ನಲ್ಲಿ ಟೈ ನೋಡುವಷ್ಟು ಹೈ ರೆಸುಲ್ಯೂಷನ್ ಇರುವ ಕ್ಯಾಮೆರಾ ಇವು. ಶೀಘ್ರವೇ ನಿರ್ಭಯಾ ಯೋಜನೆಯಡಿ ಬೆಂಗಳೂರಿನಲ್ಲಿ ಇನ್ನೂ ಸುಮಾರು 2,500 ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ. ಸರಗಳ್ಳತನ, ಹಲ್ಲೆ, ದರೋಡೆ ಮತ್ತಿತರ ಅಪರಾಧ ಕೃತ್ಯಗಳ ಪತ್ತೆಗೆ ಈ ಕ್ರಮ ಹೆಚ್ಚು ಸಹಕಾರಿ ಎಂದರು.