ಕನಕಪುರ: ನಗರದ ಅರ್.ಇ.ಎಸ್ ಸಂಸ್ಥೆಯಲ್ಲಿ ಗಾಂಧಿವಾದಿ ಹಾಗೂ ಸಂಸ್ಥೆಯ ಸಂಸ್ಥಾಪಕರಾದ ಎಸ್. ಕರಿಯಪ್ಪನವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕನಕಪುರದ ಗಾಂಧಿ ಎಂದೇ ಹೆಸರಾಗಿದ್ದ ಆರ್.ಇ. ಎಸ್. ಸಂಸ್ಥೆ ಆಡಳಿತ ಮಂಡಳಿ ಹಾಗೂಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಂಸ್ಥೆಯ ಸಂಸ್ಥಾಪಕ ಎಸ್. ಕರಿಯಪ್ಪನವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಗರದ ಪ್ರಮುಖ ಬೀದಿಗಳಲ್ಲಿ ಕರಿಯಪ್ಪನವರ ಭಾವಚಿತ್ರವನ್ನು ಬೆಳ್ಳಿಯ ರಥದಲ್ಲಿ ಜಾನಪದ ಕಲಾ ತಂಡಗಳು ಹಾಗೂ ಮಂಗಳವಾಧ್ಯ ಗಳೊಂದಿಗೆ ಮೆರವಣಿಗೆ ನಡೆಸಿ ಗೌರವ ಸಲ್ಲಿಸಿದ ನಂತರ ಕಾಲೇಜು ಮುಂಭಾಗದಲ್ಲಿ ಕರಿಯಪ್ಪ ನವರ ಹುಟ್ಟು ಹಬ್ಬ ಹಾಗೂ ಶ್ರೀ ರಾಮನವಮಿ ಪ್ರಯುಕ್ತ ಸಂಸ್ಥೆಯ ಶಾಲಾ ಕಾಲೇಜು ಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಿದರು.
ಪೂಜ್ಯ ಎಸ್. ಕರಿಯಪ್ಪ ನವರ ಸಮಾಧಿಗೆ ಪುಷ್ಪ ನವನ ಸಲ್ಲಿಸಿ,ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹೆಚ್.ಕೆ. ಶ್ರೀಕಂಠು ತಾಲ್ಲೂಕಿನ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು ಹಾಗೂ ಉನ್ನತ ಶಿಕ್ಷಣ ವನ್ನು ಪಡೆದು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿ ತಾಲ್ಲೂಕಿಗೆ ಕೀರ್ತಿ ತರಬೇಕೆಂಬ ಉದ್ದೇಶದಿಂದ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಚೇತನ ಪೂಜ್ಯ ಕರಿಯಪ್ಪ ನವರಾಗಿದ್ದು ತಮ್ಮ ಸರ್ವಸ್ವವನ್ನೂ ಮಕ್ಕಳ ಶಿಕ್ಷಣಕ್ಕೆ ದಾರೆ ಎರೆದು ನಗರದಲ್ಲಿ ಪ್ರಾಥಮಿಕ ಶಾಲೆಯಿಂದ ವೃತ್ತಿಪರ ಶಿಕ್ಷಣದ ಅವಕಾಶ ವನ್ನು ತೆರೆಯುವ ಮೂಲಕ ಸಾವಿರಾರು ಜನರ ಬಾಳಿಗೆ ಬೆಳಕಾಗಿರುವ ಇಂತಹ ಆದರ್ಶ ಪುರುಷ ಪ್ರಭು ಶ್ರೀ ರಾಮಚಂದ್ರ ಹುಟ್ಟಿದ ದಿನವೇ ಹುಟ್ಟಿ 80 ವರ್ಷಗಳ ಕಾಲ ಸಮಾಜಕ್ಕಾಗಿ ಸಾರ್ಥಕವಾದ ಜೀವನವನ್ನು ನಡೆಸಿ ಶ್ರೀ ರಾಮನವಮಿಯಂದೇ ನಿಧನರಾಗಿದ್ದು ಅವರ ದೈವತ್ವದ ಗುಣವನ್ನು ತೋರಿಸುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಕಾನೂನು ತಜ್ಞ ಎಂ. ಪುಟ್ಟೇಗೌಡ ಮಾತನಾಡಿ ಪೂಜ್ಯ ಎಸ್. ಕರಿಯಪ್ಪ ನವರು ಅಂದು ಈ ಸಂಸ್ಥೆಯನ್ನು ಆರಂಭಿಸದೇ ಇದ್ದರೆ ನನ್ನಂತಹ ಸಾವಿರಾರು ಜನರು ಅನಕ್ಷರಸ್ಥರಾಗಿ ಜೀವನ ಸಾಗಿಸಬೇಕಾಗಿತ್ತು, ಶಿಕ್ಷಣದಿಂದ ಸಮಾಜದ ಸುಧಾರಣೆ ಹಾಗೂ ಉತ್ತಮ ಬದುಕನ್ನುಕಾಣಲು ಸಾಧ್ಯ ಎಂಬುದನ್ನ ಮನಗಂಡು ಗ್ರಾಮೀಣ ಭಾಗದ ಮಕ್ಕಳಿಗಾಗಿ ಒಂದು ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಇಡೀ ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ಆದರ್ಶ ಪುರುಷ ಕರಿಯಪ್ಪ ನವ ರಾಗಿದ್ದು ಅವರ ಸಂಸ್ಥೆಯಲ್ಲಿ ನಾವು ಶಿಕ್ಷಣ ಪಡೆದಿರುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪೂಜ್ಯ ಕರಿಯಪ್ಪ ನವರ ತ್ಯಾಗ,ಆದರ್ಶ ಹಾಗೂ ಸರಳ ನಡೆ- ನುಡಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಉನ್ನತ ವ್ಯಾಸಂಗ ಪಡೆದು ಸಂಸ್ಥೆಗೆ ತಾಲ್ಲೂಕಿಗೆ ಕೀರ್ತಿಯನ್ನು ತರುವಂತೆ ಕಿವಿಮಾತು ಹೇಳಿದರು.ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಎಲ್ ಶಿವಕುಮಾರ್, ನಾಗರಾಜು ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಸಂಸ್ಥೆಯ ಬಂದು ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.