ನವದೆಹಲಿ: ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ (ಎಬಿ-ಪಿಎಂಜೆಎವೈ) ಯೋಜನೆಯಡಿ ಚಿಕಿತ್ಸೆ ನಿರಾಕರಿಸಿದ್ದರಿಂದ ಮನನೊಂದು 72 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.
ಅಧಿಕೃತ ಮೂಲಗಳ ಪ್ರಕಾರ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ರಾಜ್ಯ ಆರೋಗ್ಯ ಪ್ರಾಧಿಕಾರದಿಂದ ವರದಿ ಕೇಳಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನದ ಹೊಣೆಯನ್ನು ಹೊತ್ತುಕೊಂಡಿದೆ.
ವರದಿಗಳ ಪ್ರಕಾರ, ವ್ಯಕ್ತಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನಿರಾಕರಿಸಿದ ನಂತರ ಮನನೊಂದು ಡಿಸೆಂಬರ್ 25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ತನಗೆ ಕ್ಯಾನ್ಸರ್ ಇರುವುದು ಪತ್ತೆಯಾದ 15 ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿ ಬಹಿರಂಗಪಡಿಸಿದೆ. ಆದರೆ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿಸ್ತರಿಸಿರುವ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಆದಾಯದ ಮಿತಿಗಳಿಲ್ಲದೆ 70 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೂ ಎಬಿ-ಪಿಎಂಜೆಎವೈ ಅಡಿ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಅದರಂತೆ 70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ವಾರ್ಷಿಕ 5 ಲಕ್ಷ ರೂ.ಗಳವರೆಗೆ ವಿಮಾ ಸೌಲಭ್ಯ ಸಿಗಲಿದೆ. ಈ ಯೋಜನೆಯಡಿ, ಹಿರಿಯ ನಾಗರಿಕರು ಪ್ರತ್ಯೇಕ ಆಯುಷ್ಮಾನ್ ವಯ ವಂದನಾ ಕಾರ್ಡ್ ಅನ್ನು ಸಹ ಪಡೆಯುತ್ತಾರೆ.
ಎಬಿ- ಪಿಎಂಜೆಎವೈ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ವಿಮೌ ಸೌಲಭ್ಯ ಕಲ್ಪಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರದ ಚಿಕಿತ್ಸೆಗಳನ್ನು ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದಾಗಿದೆ.