ಹಿರಿಯೂರಿನ ನಂಜಯ್ಯನ ಕೊಟ್ಟಿಗೆ ಸ್ಮಶಾನದಲ್ಲಿ ನಟ್ಟ ನಡುರಾತ್ರಿ ವೇಳೆ ರಾಷ್ಟçಕವಿ, ರಸಋಷಿ ಕುವೆಂಪು ದಿನಾಚರಣೆ
ಹಿರಿಯೂರಿನ ನಂಜಯ್ಯನ ಕೊಟ್ಟಿಗೆ ಸ್ಮಶಾನದಲ್ಲಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕುವೆಂಪು ಗ ವಿಶ್ವ ಕನ್ನಡ ಕಲಾ ಸಂಸ್ಥೆ ನೋ ಹಾಗೂ ಕುವೆಂಪು ಗೆಳೆಯರ ಬಳಗ ಇವರ ಆಯೋಜಕತ್ವದಲ್ಲಿ ಕುವೆಂಪು ದಿನಾಚರಣೆಯನ್ನು ಆಚರಿಸಲಾಯಿತು. ಈ ಪ್ರಯುಕ್ತ ಸ್ಮಶಾನ ಕವಿಗೋಷ್ಠಿಯನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮವನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಗರದ ವಕೀಲರಾದ ಪಿ.ಆರ್ ದಾಸ್ ರವರು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಸ್ಮಶಾನವೆಂದರೆ ಭೂತ ಪ್ರೇತಗಳ ಭಯಾನಕ ಸ್ಥಳ, ಹಗಲು ವೇಳೆಯಲ್ಲಿ ಇಲ್ಲಿ ತಿರುಗಾಡಲು ಹೆದರುವ ಮನಃಸ್ಥಿತಿ ಇರುವಾಗ ಇಂತಹ ವಿಭಿನ್ನ ವಿನೂತನ ಕಾರ್ಯಕ್ರಮವನ್ನು ನಡುರಾತ್ರಿ ಸ್ಮಶಾನದಲ್ಲಿ ಮಾಡುವುದು ಅಚ್ಚರಿ ವಿಷಯವಾಗಿದೆ ಎಂದರು. ಈ ಮೂಲಕ ಕುವೆಂಪುರವರ ತತ್ವ ವಿಚಾರಗಳನ್ನು ಜೀವಂತವಾಗಿಡುವ ಪ್ರಯತ್ನಗಳಲ್ಲಿ ಇದು ಉತ್ತಮವಾದದ್ದು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಆಯೋಜಕರದ ವಿಶ್ವಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಈ ರವೀಶ ಅಕ್ಕರರವರು ಮಾತನಾಡಿ ನಮ್ಮ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ರಾಜ್ಯಾದ್ಯಂತ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಮೊದಲ ಕಾರ್ಯಕ್ರಮವನ್ನು ಕುವೆಂಪುರವರ ಜನ್ಮಸ್ಥಳವಾದ ಕವಿಶೈಲದಲ್ಲಿ ಮಾಡುವ ಮೂಲಕ ಕನ್ನಡ ನಾಡು ನುಡಿಯ ಸೇವೆಯನ್ನು ಆರಂಭಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಸಹಸ್ರ ಕವಿಗಳ ಗೋಷ್ಠಿಯನ್ನು ಆಯೋಜಿಸಿದ್ದನ್ನು ಸ್ಮರಿಸುತ್ತಾ, ಕುವೆಂಪು ದಿನಾಚರಣೆಯಂತಹ ಕಾರ್ಯಕ್ರಮವನ್ನು ನಡುರಾತ್ರಿ ಸ್ಮಶಾನದಲ್ಲಿ ಮಾಡುವುದು ನನ್ನ ವಿಭಿನ್ನ ಆಲೋಚನೆಗಳಲ್ಲಿ ಒಂದಾದು. ಈ ಆಲೋಚನೆಯನ್ನು ಸಾಕಾರಗೊಳಿಸಲು ಹಿರಿಯೂರಿನಲ್ಲಿ ಈ ದಿನ ಕಾರ್ಯಕ್ರಮವನ್ನು ನಮ್ಮೆಲ್ಲ ಗೆಳೆಯರ ಸಹಕಾರದೊಂದಿಗೆ ಯಶಸ್ವಿಯಾಗುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ವಿಶ್ವ ಕನ್ನಡ ಕಲಾ ಸಂಸ್ಥೆಯ ಗೌರವಧ್ಯಕ್ಷರಾದ ಡಾ. ಎಸ್ ಎಚ್ ಶಫಿಉಲ್ಲರವರು, ಕಳೆದ ನಾಲ್ಕು ವರ್ಷಗಳಿಂದ ಸ್ಮಶಾನದಲ್ಲಿ ಕುವೆಂಪು ದಿನಾಚರಣೆ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸುವ ಮೂಲಕ ಸಮಾಜದ ಜನರ ಸ್ಮಶಾನ ಭಯವನ್ನು ಹೋಗಲಾಡಿಸುವದರೊಂದಿಗೆ ಕುವೆಂಪು ವಿಚಾರಗಳ ಹಿನ್ನೆಲೆಯಲ್ಲಿ ಸಮಾಜದ ಕಂದಾಚಾರಗಳನ್ನು ಹೋಗಲಾಡಿಸಲು ಅಗತ್ಯವಾದ ಅರ್ಥಗರ್ಭಿತ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದ ಆಯೋಜನೆಯ ವಿರುದ್ಧವಾಗಿ ಕೆಲವು ಕುಹಕಿಗಳ ನಿಂದನಾತ್ಮಕ ನುಡಿಗಳನ್ನು ತಲೆಕೆಡಿಸಿಕೊಳ್ಳದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೇವೆ. ಇದಕ್ಕೆ ಚಿತ್ರದುರ್ಗ, ತುಮಕೂರು, ಮೈಸೂರು, ಕೊಪ್ಪಳ ಜಿಲ್ಲೆಗಳಿಂದ ಹಾಗೂ ಹಿರಿಯೂರು ಮತ್ತು ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ ಕವಿ ಹಾಗೂ ಕವಯತ್ರಿಯರ ಸಹಕಾರ ಶ್ಲಾಘನೀಯ. ಅಲ್ಲದೆ ಈ ಕಾರ್ಯಕ್ರಮಕ್ಕೆ ಮಹಿಳೆಯರು ಸಹ ಯಾವುದೇ ಸಂಕೋಚ ಭಯವಿಲ್ಲದೆ ನಿರ್ಭೀತಿಯಿಂದ ಆಗಮಿಸಿದ್ದು ವಿಶೇಷವಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪನ್ಯಾಸಕ ಅನಿಲ್ ಕುಮಾರ್, ಆಕಾಶವಾಣಿ ಸಂದರ್ಶಕ ನಿರೂಪಕರಾದ ನವೀನ್ ಮಸ್ಕಲ್ ಆಸೆ ಸಾಹಿತಿ ಜಗನ್ನಾಥ್ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಬೆಳಕುಪ್ರಿಯ, ನಿಶಾ ಮುಳಗುಂದ ಮೈಸೂರು, ಲೀಲಾ ಗುರುರಾಜ್ ತುಮಕೂರು, ಶಿವಮೂರ್ತಿ ಕೋಡಿಹಳ್ಳಿ, ವೇಣುಕುಮಾರ್ ಭರಂಪಪುರ, ಪ್ರವೀಣ್ ಕುಮಾರ್, ಬ್ಯಾಡರಹಳ್ಳಿ, ಶಿವಾನಂದ ಬಂಡೆಹಳ್ಳಿ, ಮುದ್ದುರಾಜ್ ಹುಲಿ ತೊಟ್ಟಿಲು, ಹಂಸದಾಸ ಚಳ್ಳಕೆರೆ, ರಂಗಧಾಮ ಸಮುದ್ರದಳ್ಳಿ, ಭರತ್ ಎಚ್. ಜಿ. ಬಿ, ಪ್ರವೀಣ್ ಕೆ ಎನ್ ಮೈಸೂರು, ಶಾರದಾ ಜೈ ರಾಮ್ ಚಿತ್ರದುರ್ಗ, ಸುರೇಂದ್ರ ಸ್ವಾಮಿ ಕೊಪ್ಪಳ, ಕಿರಣ್ ಎಸ್ ಮೈಸೂರು, ಶಶಿಧರ ಕೋಡಿಹಳ್ಳಿ, ತೇಜಸ್ ಆದಿವಾಲ, ಹೆಚ್. ಕೆ ಗಿರಿಜಾ ಹಿರಿಯೂರು ರಾಜಣ್ಣ ಗೋಪನಳ್ಳಿ, ಕೆಂಚಮ್ಮ ಕವನ ವಾಚನ ಮಾಡಿದರು. ಶಾರದಾ ಜೈರಾಮ್ ಹಾಗೂ ಗಿರಿಜಾ ಪ್ರಾರ್ಥಿಸಿದರು, ರಂಗಧಾಮ ಸಮುದ್ರದಲ್ಲಿ ಸ್ವಾಗತಿಸಿದರು, ವೇಣು ಕುಮಾರ್ ಪರಂಪರ ನಿರೂಪಿಸಿದರು, ಶಿವಮೂರ್ತಿ ಕೋಡಿಹಳ್ಳಿ ವಂದಿಸಿದರು.



