ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾ ಗೌಡ ವಿನಯ್ ಸೇರಿದಂತೆ ಹಲವರ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಾಯಗೊಳ್ಳಲಿದೆ.
ಜೂನ್ 11ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಈವರೆಗೆ ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಇಂದು ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಜೂನ್ 11ರ ಮುಂಜಾನೆ ದರ್ಶನ್ ಅವರನ್ನು ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ಬಂಧಿಸಲಾಯಿತು.
ಆ ಬಳಿಕ ಪವಿತ್ರಾ ಗೌಡ ಸೇರಿ ಹಲವರ ಬಂಧನ ಆಗಿತ್ತು. ಅನುಮಾನ ಇರುವ ಎಲ್ಲರನ್ನೂ ಪೊಲೀಸರು ಬಂಧಿಸಿದರು. 2ನೇ ಬಾರಿಗೆ ಪೊಲೀಸ್ ಕಸ್ಟಡಿ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಎದುರು ಆರೋಪಿಗಳನ್ನು ಪೊಲೀಸರು ಹಾಜರುಪಡಿಸಿ ಮತ್ತೆ ವಿಚಾರಣೆಗಾಗಿ ಮತ್ತಷ್ಟು ದಿನ ಪೊಲೀಸ್ ವಶಕ್ಕೆ ಕೇಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.