ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡ ಪರ ಸಂಘಟನೆಗಳು ನಡೆಸಿದ ತೀವ್ರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದ ಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನೆಗೆ ಮಣಿದಿರುವ ಇಲಾಖೆ,
ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ರೈಲ್ವೆ ಇಲಾಖೆಯು ಗೂಡ್ಸ್ ರೈಲ್ವೆ ಮ್ಯಾನೇಜರ್ ಮತ್ತು ಎಲ್ಡಿಸಿ ಹುದ್ದೆಗಳ ಮುಂಬಡ್ತಿಗಾಗಿ ಪರೀಕ್ಷೆಯನ್ನು ಹಮ್ಮಿಕೊಂಡಿತ್ತು. ಆದರೆ ಈ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿತ್ತು. ಸ್ಥಳೀಯ ಭಾಷೆಯಾದ ಕನ್ನಡವನ್ನು ಕಡೆಗಣಿಸಿರುವುದು ಕನ್ನಡಿಗ ನೌಕರರಿಗೆ ದೊಡ್ಡ ಹಿನ್ನಡೆಯಾಗಿತ್ತು.
ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆಯ ಧೋರಣೆಯನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಇಂದು ಹುಬ್ಬಳ್ಳಿಯ ರೈಲ್ವೆ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿದರು.
ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಕನ್ನಡ ವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಸುತ್ತಮುತ್ತಲಿನ ಭಾಗದ ಕನ್ನಡಿಗರಿಗೆ ಉದ್ಯೋಗ ಮತ್ತು ಭಡ್ತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ತೀವ್ರತೆಯನ್ನು ಅರಿತ ರೈಲ್ವೆ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾದರು. ಪ್ರತಿಭಟನಾಕಾರರ ಬೇಡಿಕೆಗೆ ಮಣಿದು, ಇಂದು ನಡೆಯಬೇಕಿದ್ದ ಪದೋನ್ನತಿ ಪರೀಕ್ಷೆಯನ್ನು ಮುಂದೂಡುವುದಾಗಿ ಅಧಿಕೃತವಾಗಿ ಘೋಷಿಸಿದರು. ಮುಂದಿನ ಪರೀಕ್ಷಾ ದಿನಾಂಕ ಹಾಗೂ ಭಾಷೆಯ ಕುರಿತಾದ ಸ್ಪಷ್ಟನೆಯನ್ನು ಶೀಘ್ರದಲ್ಲೇ ನೀಡುವುದಾಗಿ ಇಲಾಖೆ ಭರವಸೆ ನೀಡಿದೆ.
ನೈಋತ್ಯ ರೈಲ್ವೇ ವಲಯದಲ್ಲಿ ಕನ್ನಡಿಗರಿಗೆ ಅನ್ಯಾಯ ಕರವೇ ಪ್ರತಿಭಟನೆಗೆ ಮಣಿದು ಮುಂಬಡ್ತಿ ಪರೀಕ್ಷೆ ಮುಂದೂಡಿಕೆ



