ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ವಿಡಿಯೋ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಹೇಳಿದಂತೆ ಭಾರತಕ್ಕೆ ಮರುಳುತ್ತಿದ್ದಾರೆ.ನಾಳೆ ಮಧ್ಯರಾತ್ರಿ 12.30ರ ಸುಮಾರಿಗೆ ಪ್ರಜ್ವಲ್ ರೇವಣ್ಣರವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ
ಈಗಾಗಲೇ ಎರಡು ಬಾರಿ ಟಿಕೆಟ್ ಬುಕ್ ಮಾಡಿ, ಭಾರತಕ್ಕೆ ಬಾರದೇ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಪ್ರಜ್ವಲ್ ರೇವಣ್ಣ, ಇದೀಗ ಮೇ 30 ರಂದು ಜರ್ಮಿನಿಯ ಮ್ಯೂನಿಚ್ನಿಂದ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.ಮತ್ತೆ ಮ್ಯೂನಿಚ್ನಿಂದ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಸತತ 9 ಘಂಟೆಗಳ ಪ್ರಯಾಣ ಮಾಡಿ, 31 ರ ತಡರಾತ್ರಿ 12:30 ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಮ್ಯೂನಿಚ್ನಿಂದ ಮೇ 30 ನೇ ತಾರೀಖು ಸಂಜೆ ಹೊರಡುವ ಸಾಧ್ಯತೆಯಿದ್ದು, ಮಧ್ಯರಾತ್ರಿ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಜರ್ಮನಿಯ ಮ್ಯೂನಿಚ್ ನಿಂದ ಬೆಂಗಳೂರಿಗೆ ಟಿಕೆಟ್ ಕಾಯ್ದಿಯಿರಿಸಿದ್ದಾರೆ. ಲುಫ್ತನಸಾ ಏರ್ಲೈನ್ಸ್ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಎಸ್ಐಟಿ ಮೂಲಗಳಿಂದ ಲಭ್ಯವಾಗಿದೆ.
ಪ್ರಜ್ವಲ್ ಅವರು ಬೆಂಗಳೂರಿಗೆ ಬರಲು ಕಾಯ್ದಿರಿಸಿರುವ ವಿಮಾನ ಟಿಕೆಟ್ನಲ್ಲಿ ತಮ್ಮ ಹೆಸರನ್ನು ಮಾತ್ರ ನಮೋದಿಸಿದ್ದು, ಯಾವುದೇ ರೀತಿಯ ಫೋನ್ ನಂಬರ್ ಆಗಲಿ, ಇಮೇಲ್ ವಿಳಾಸ ಆಗಲಿ ನಮೂದಿಸಿಲ್ಲ ಎಂದು ಹೇಳಲಾಗಿದೆ. ತಮ್ಮೊಂದಿಗೆ ಒಟ್ಟು ನಾಲ್ಕು ಬ್ಯಾಗ್ಗಳನ್ನು ತರಲಿದ್ದು, ಎರಡು ಕ್ಯಾರಿಬ್ಯಾಗ್ ಹಾಗೂ 2ಟ್ರ್ಯಾಲಿ ಬ್ಯಾಗ್ ಸೇರಿದಂತೆ ಒಟ್ಟು 64 ಕೆಜಿ ತೂಕದ ಲಗೇಜ್ ತರಲು 16ಸಾವಿರದ 307ರೂಪಾಯಿ ಶುಲ್ಕ ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡು ಬಾರಿ ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಜರ್ಮನಿಯಲ್ಲಿಯೇ ಉಳಿದಿದ್ದ ಪ್ರಜ್ವಲ್ ಇದೀಗ ಟಿಕೆಟ್ ಬುಕ್ ಮಾಡಿಸಿದ್ದು, ತಾವೇ ಸ್ವತಃ ವಿಡಿಯೋ ಮಾಡಿ 31ರಂದು ಬರುವುದಾಗಿ ಹೇಳಿದ್ದರು ಈ ಬಾರಿ ಬರುವುದು ಖಚಿತ ಎನ್ನಲಾಗುತ್ತಿದೆ.ಪ್ರಜ್ವಲ್ ಬೆಂಗಳೂರಿಗೆ ಬರುತ್ತಿದ್ದ ಅವರನ್ನು ವಶಕ್ಕೆ ಪಡೆಯಲು ಎಸ್ಐಟಿ ಸಿದ್ಧತೆ ನಡೆಸಿದೆ.