ಯಲಹಂಕ: ಅಂಬಾರಿ ಅಂದ ಕ್ಷಣ ವಿಶ್ವವಿಖ್ಯಾತ ಮೈಸೂರು ದಸರವನ್ನು ನಾವು ನೆನಪಿಸಿಕೊಳ್ಳುತ್ತೇವೆ, ಶ್ರೀ ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಗಜ ಪಡೆಯನ್ನ ನೋಡಲು ದೇಶ ವಿದೇಶಗಳನ್ನು ಲಕ್ಷಾಂತರ ಜನರು ಬರುತ್ತಾರೆ. ಇದೇ ಮಾದರಿಯಲ್ಲಿ ಊರ ಹಬ್ಬಕ್ಕೆ ಆನೆ ಹೊತ್ತ ಅಂಬಾರಿ ಮೆರಗೂ ನೋಡಲು ಆಕರ್ಷಣೆಯಾಗಿತ್ತು.
ಇಂತಹ ಅದ್ದೂರಿ ಜಾತ್ರಾ ಮಹೋತ್ಸವ ನಡೆದಿದ್ದು ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಕಿತ್ತನಹಳ್ಳಿ ಗ್ರಾಮದಲ್ಲಿ ಈ ಬೇಸಿಗೆ ಸಂದರ್ಭದಲ್ಲಿ ಬಿಸಿಲಿನ ಜಳ ಹೆಚ್ಚಾಗಿದ್ದು ಬರಗಾಲದ ಮುನ್ಸೂಚನೆ ನೀಡುತ್ತಿದೆ ಹೀಗಾಗಿ ನಾಡಿಗೆ ಉತ್ತಮ ಮಳೆ ಬೆಳೆಯಾಗಿ ನಾಡು ಸಮೃದ್ಧಿಯಾಗಲಿ, ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯಲಿ, ನದಿ ಕೆರೆ ಕುಂಟೆಗಳು ತುಂಬಿ ಅಂತರ್ಜಲ ಮಟ್ಟ ಏರಿಕೆಯಾಗಲಿ ಎಂದು ಕಿತ್ತನಹಳ್ಳಿ ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಜಾತ್ರಾ ಮಹೋತ್ಸವವನ್ನು ದಸರಾ ಮಾದರಿಯಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು.
ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ರಾಣೆಬೆನ್ನೂರಿನಿಂದ ಕರೆಸಿದ್ದ ಗಜರಾಜನ ಮೇಲೆ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳು ವಾದ್ಯಗೋಷ್ಠಿಗಳ ಮೂಲಕ ಮೆರವಣಿಗೆ ನಡೆಸಲಾಯಿತು.ಸಾವಿರಾರು ಭಕ್ತರು ಗ್ರಾಮಸ್ಥರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಕಿತ್ತನಹಳ್ಳಿಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಮಕೃಷ್ಣಪ್ಪ ಸೇರಿದಂತೆ ಊರಿನ ಪ್ರಮುಖ ನಾಯಕರು ಉಪಸ್ಥಿತರಿದ್ದರು.