ಬೆಂಗಳೂರು: ರಾಜಕಾರಣದಲ್ಲಿ ಶತ್ರುಗಳು ಮಿತ್ರರು ಯಾರು ಎಂಬುದು ತಿಳಿಯದು. ಕಾಲಕಾಲಕ್ಕೆ ಬದಲಾಗುವ ರಾಜಕಾರಣದಲ್ಲಿ ರಾಜಕಾರಣಿಗಳು ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಬದಲಾಯಿಸುತ್ತಾರೆ ಎಂಬುದಕ್ಕೆ ನಿನ್ನೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎನ್. ರಾಜಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ. ನಿನ್ನೆ ಮಧುಗಿರಿ ಕ್ಷೇತ್ರ ವ್ಯಾಪ್ತಿಯ ದೊಡ್ಡೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತುಮಕೂರು ಜಿಲ್ಲೆಯಲ್ಲಿ ವೈಟ್ವಾಶ್ ಆಗಬಹುದು ಎಂದು ನುಡಿದಿದ್ದಾರೆ.ಇದಕ್ಕೆ ಇಂಬುಕೊಡುವಂತೆ ಹಿಂದೆ ತಾವು ಪಕ್ಷ ತೊರೆದು ಬೇರೆ ಪಕ್ಷ ಸೇರಿದ್ದನ್ನು ಸ್ಮರಿಸಿದ್ದಾರೆ. ಒಟ್ಟಾರೆ ರಾಜಣ್ಣ ಕಾಂಗ್ರೆಸ್ ತೊರೆಯುತ್ತಾರೆ ಎಂಬುದನ್ನು ಮುನ್ಸೂಚನೆ ನೀಡಿದ್ದಾರೆ. ಈ ಹಿಂದೆ ತಾವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ತಮ್ಮನ್ನು ಪಕ್ಷ ಕಡೆಗಣಿಸಿದ ಹಿನ್ನೆಲೆಯಲ್ಲಿ ೨೦೦೪ರಲ್ಲಿ ಜೆಡಿಎಸ್ ಸೇರಿ ಶಾಸಕನಾಗಿದ್ದೆ ಆದರೆ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ವೈಟ್ವಾಶ್ ಆಗಿತ್ತು ಎಂದಿದ್ದಾರೆ.
ಅಂದು ತಾವು ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನೆಡೆ ಸಾಧಿಸಲು ಕಾರಣವಾಯಿತು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ರಾಜಣ್ಣ ಇದೀಗ ಪುನಃ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿದ್ದು, ಶಾಸಕರಾಗಿ ಸಚಿವರಾಗಿ ಅಧಿಕಾರ ಅನುಭವಿಸಿದ ಅವರು ತಮ್ಮ ನಡವಳಿಕೆಯಿಂದಾಗಿ ಮಂತ್ರಿ ಪದವಿಯನ್ನು ಕಳೆದುಕೊಂಡಿದ್ದಾರೆ. ಇದೀಗ ಪುನಃ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಹೇಳಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯುವುದಕ್ಕೆ ಕುತೂಹಲ ಮೂಡಿಸಿದೆ. ಪಕ್ಷದಲ್ಲಿದ್ದುಕೊಂಡೇ ತಮ್ಮದೇ ನಡವಳಿಕೆಯಿಂದ ಮಂತ್ರಿ ಪದವಿಯಿಂದ ಸ್ಥಾನಪಲ್ಲಟರಾಗಿರುವ ಅವರು ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ.
ಚುನಾವಣಾ ರಾಜಕೀಯಕಕ್ಕೆ ಮುಂದಿನ ದಿನಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿರುವ ಅವರು, ಮುಂದಿನ ಚುನಾವಣೆಯೊಳಗೆ ಯಾವ ನಿಲುವು ತಳೆಯುತ್ತಾರೆ.ಈಗಾಗಲೇ ನೀಡುತ್ತಿರುವ ಹೇಳಿಕೆಗಳಿಂದಾಗಿ ಪಕ್ಷದ ಕೆಲ ಪ್ರಮುಖರ ಕೆಂಗಣ್ಣಿಗೆ ಗುರಿಯಾಗಿರುವ ಅವರು ಮುಂದಿನ ರಾಜಕೀಯ ಭವಿಷ್ಯವನ್ನು ಯಾವ ರೀತಿ ಕಂಡುಕೊಳ್ಳುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ೨೦೨೦ ಮತ್ತು ೨೪ರ ನಡುವೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ರಾಜಣ್ಣ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದುಕೊಂಡು ಅಂದಿನ ಆಡಳಿತಾರೂಢ ನಾಯಕರ ವಿರುದ್ಧ ತಮ್ಮ ರಾಜಕೀಯ ಆದಿಯನ್ನು ಸವಿಸಿದರು.೨೦೦೨ರಲ್ಲಿ ತುಮಕೂರು ನಗರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಆಪ್ತನನ್ನು ನಗರಸಭಾಧ್ಯಕ್ಷರನ್ನಾಗಿ ಮಾಡಲು ಉರುಳಿಸದ ರಾಜಕೀಯ ದಾಳ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೂ ಇರಿಸುಮುರಿಸು ಉಂಟು ಮಾಡಿತ್ತು.ಇದಾದ ನಂತರ ಜಿಲ್ಲೆಯಲ್ಲಿ ನಡೆದ ಬಹುತೇಕ ರಾಜಕೀಯ ಚಟುವಟಿಕೆಗಳಲ್ಲಿ ಪಕ್ಷದ ವಿರುದ್ಧವಾಗಿಯೇ ರಾಜಣ್ಣ ತಮ್ಮ ಹೆಜ್ಜೆ ಹಾಕಿದರು.
ಅದರ ಪರಿಣಾಮವೇ ಅವರು ಕಾಂಗ್ರೆಸ್ ಪಕ್ಷ ಗುಡ್ಬೈ ಹೇಳಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದರು. ೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಬೆಳ್ಳಾವಿ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಸಿದ್ದರಾಮಯ್ಯ ನವರ ಕಾರಣಕ್ಕಾಗಿ ಕಾಂಗ್ರೆಸ್ ಪಾಳಯಕ್ಕೆ ಬಂದರು.ಕಾಂಗ್ರೆಸ್ ಪಾಳಯದಲ್ಲಿ ಸಿದ್ದರಾಮಯ್ಯನವರ ಅನುಯಾಯಿಯಾಗಿ ಗುರುತಿಸಿಕೊಂಡಿರುವ ಅವರು, ೨೦೧೩ರಲ್ಲಿ ಸಚಿವರಾಗಲು ಸಾಧ್ಯವಾಗಲಿಲ್ಲ. ಇದೀಗ ಈ ಭಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಬೆಂಬಲದಿಂದಾಗಿ ಸಚಿವರಾದರು.
ಈ ಸರ್ಕಾರದಲ್ಲೂ ಮೊದಲಿನಿಂದಲೂ ತಮ್ಮದೇ ಆದ ಹೇಳಿಕೆಗಳಿಂದ ಹಲವರ ಮುಂಗೋಪಕ್ಕೆ ಕಾರಣವಾಗುತ್ತಲೇ ಬಂದಿದ್ದರು.ಇತ್ತೀಚೆಗೆ ಅವರೊಂದು ನೀಡಿದ ಹೇಳಿಕೆ ಪರಿಣಾಮ ಕಾಂಗ್ರೆಸ್ ವರಿಷ್ಠರಿಂದಲೇ ಸಚಿವ ಪದವಿಯಿಂದ ಹಿಂದಕ್ಕೆ ಸರಿಯುವಂತಾಯಿತು. ಇದೀಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ರಾಜಣ್ಣ ಅವರು ನೀಡಿರುವ ನಿನ್ನೆಯ ಹೇಳಿಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯುತ್ತಾರೆ ಎಂಬುದಕ್ಕೂ ಸಹ ಮುನ್ಸೂಚನೆಯಂಬಂತಿದೆ.



