ಬೆಂಗಳೂರು: ರಾಜ್ಯದಲ್ಲಿ ಎರಡು ಕಡೆ ನಡೆದಿರುವ ವಿಧಾನಸಭಾ ಉಪಚುನಾವಣೆಯ ಮತದಾನಕ್ಕೆ ಸಿದ್ಧತೆ ನಡೆದಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನಡೆದಿರುವ ಸಿದ್ಧತೆಗಳ ಬಗ್ಗೆ ಚುನಾವಣಾಧಿಕಾರಿ ಸಂಗಪ್ಪ ವಿವರಣೆ ನೀಡಿದ್ದಾರೆ. ಮತದಾನಕ್ಕಾಗಿ 332 ಮತಕೇಂದ್ರ ಸ್ಥಾಪನೆ ಮಾಡಲಾಗಿದೆ. 1564 ಮತದಾನದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆಗೆ ಬಂದು ಮತದಾನ ಮಾಡುವ ಮತದಾರರಿಗೆ ವ್ಹೀಲ್ ಚೇರ್ ಅಗತ್ಯಬಿದ್ದಲ್ಲಿ ಅದರ ವ್ಯವಸ್ಥೆ ಮಾಡಲಾಗಿದೆ. ಮತದಾನ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸುವ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಮತದಾನ ಮಾಡಲು ಭಯಪಡುವಂತಿಲ್ಲ. ಧೈರ್ಯದಿಂದ ಬಂದು ಮತದಾನ ಮಾಡುವಂತೆ ಸಲಹೆ ನೀಡಿದ್ದಾರೆ. ಬಾಗಲಕೋಟೆಯ ನವನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ. ಒಟ್ಟಾರೆ ಮತದಾನಕ್ಕಾಗಿ ಸಕಲ ಸಿದ್ಧತೆ ನಡೆಸಿರುವುದಾಗಿ ಚುನಾವಣಾ ಅಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
ಇತ್ತ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರ ಮನವೊಲಿಕೆಗಾಗಿ ಅಂತಿಮ ಕಸರತ್ತು ನಡೆಸಿದ್ದಾರೆ.
ಬಿಜೆಪಿ ವತಿಯಿಂದ ಬೂತೊಂದಕ್ಕೆ 4 ಜನ ಕಾರ್ಯಕರ್ತರನ್ನು ನಿಯೋಜಿಸಿ, ಆ ಬೂತ್ ವ್ಯಾಪ್ತಿಯ ಮತದಾರರನ್ನು ಕರೆತಂದು ಮತದಾನ ಮಾಡಿಸುವ ಜವಾಬ್ದಾರಿ ವಹಿಸಲಾಗಿದೆ. ಇದರ ಮೇಲ್ ಉಸ್ತುವಾರಿಯಾಗಿ ಓರ್ವ ಕಾರ್ಯಕರ್ತನನ್ನು ನಿಯೋಜಿಸಲಾಗಿದೆ.ಇತ್ತ ದಾವಣಗೆರೆಯಲ್ಲೂ ಸಹ ಮತದಾನಕ್ಕಾಗಿ ಸಿದ್ಧತೆ ನಡೆದಿದ್ದು, ಚುನಾವಣೆ ಸುಗಮವಾಗಿ ನಡೆಯಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮತದಾನಕ್ಕೆ ಸಿದ್ಧತೆ ಉಪಚುನಾವಣೆ ಮತದಾರರ ಮನಗೆಲ್ಲಲು ಅಭ್ಯರ್ಥಿಗಳ ಅಂತಿಮ ಕಸರತ್ತು ನಾಳೆ ಮತದಾನ ಬಿಗಿ ಭದ್ರತೆ



