ದೇವನಹಳ್ಳಿ: ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ-7 ರ ಬಳಿಯ ಮೈದಾನದಲ್ಲಿ ಏಪ್ರಿಲ್ 20 ರಂದು ಬಿಜೆಪಿ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಸಿದ್ಧತೆ ನಡೆಯುತ್ತಿದ್ದು, ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಎನ್.ಡಿ.ಎ ಅಭ್ಯರ್ಥಿ ಡಾ. ಕೆ .ಸುಧಾಕರ್ ಹೇಳಿದರು.
ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲು ಗ್ರಾಮದಲ್ಲಿರುವ ಕೃಷ್ಣೋದಯ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಿಗೆ ಬಹಳ ಉತ್ಸಾಹ ಬಂದಿದೆ. ಅವರ ಆಗಮನದಿಂದಾಗಿ ಚುನಾವಣೆಯ ಮೇಲೆ ದೊಡ್ಡ ಪರಿಣಾಮವಾಗಲಿದ್ದು, ನನಗೆ ಹೆಚ್ಚು ಲಾಭವಾಗಲಿದೆ ಎಂದರು.
ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾತನಾಡಿ ಮೋದಿ ಅವರು ಮತ್ತೆ ಪ್ರಧಾನಿ ಆಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕಾಂಗ್ರೆಸ್ ನಾಯಕರು ಅಸೂಯೆಗೆ ಒಳಗಾಗಿದ್ದು, ಸಂವಿಧಾನ ಬದಲಾಗುತ್ತೆ, ಪ್ರಜಾಪ್ರಭುತ್ವ ನಾಶ ಆಗುತ್ತೆ, ಮೀಸಲಾತಿ ರದ್ದು ಆಗುತ್ತೆ ಎಂದು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ಯುಪಿಎ ಎರಡು ಬಾರಿ ಮೇಲ್ಜಾತಿಯವರನ್ನೇ ರಾಷ್ಟ್ರಪತಿ ಮಾಡಿತ್ತು. ಮೋದಿ ಸರ್ಕಾರ ಒಂದು ಬಾರಿ ದಲಿತರನ್ನು ಮತ್ತೊಮ್ಮೆ ಬುಡಕಟ್ಟು ಸಮುದಾಯದ ಮಹಿಳೆಯನ್ನು ಆಯ್ಕೆ ಮಾಡಿದೆ.
ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಾಶ ಮಾಡಿ ಜನರು ಬೀದಿಗಿಳಿಯುವಂತೆ ಮಾಡಿದ್ದು ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ.ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆದ್ದರೆ ಮೋದಿಯವರ ಜೊತೆ ಕುಳಿತು ಜನರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಜಿ .ಚಂದ್ರಣ್ಣ, ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ,ಬಿ .ಮುನೇಗೌಡ ,ತಾಲೂಕು ಅಧ್ಯಕ್ಷರುಗಳಾದ ಆರ್. ಮುನೇಗೌಡ ,ಸುಂದರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಹೆಚ್ಎಂ, ಜಿ .ಎ.ರವೀಂದ್ರ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.