ಬೆಂಗಳೂರು: ನವೆಂಬರ್ ೨೮ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿ ದೃಢಪಡಿಸಿದೆ. ನವೆಂಬರ್ ೨೮ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ನೀಡುವ ಬಗ್ಗೆ ಪ್ರಧಾನಿ ಕಚೇರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಆ ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ನವೆಂಬರ್ ೨೮ರಂದು ಬೆಳಿಗ್ಗೆ ೧೧.೦೫ಕ್ಕೆ ದೆಹಲಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ತಕ್ಷಣವೇ ೧೧.೧೦ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಅವರು ಬೆಳಿಗ್ಗೆ ೧೧.೩೫ಕ್ಕೆ ಉಡುಪಿಯ ಹೆಲಿಪ್ಯಾಡ್ ತಲುಪಲಿದ್ದಾರೆ.
ಉಡುಪಿಯಲ್ಲಿ ಈ ಹಿಂದೆ ಯೋಜಿಸಲಾಗಿದ್ದ ರೋಡ್ ಶೋ ರದ್ದಾಗಿದೆ. ಪ್ರಧಾನಿ ಮೋದಿ ಮಧ್ಯಾಹ್ನ ೧೨ ಗಂಟೆಗೆ ನೇರವಾಗಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ಬಳಿಕ ಸುವರ್ಣತೀರ್ಥ ಮಂಟಪ ಮತ್ತು ಕನಕನ ಕಿಂಡಿಗೆ ಸ್ವರ್ಣ ಕವಚ ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀಕೃಷ್ಣನ ದರ್ಶನ ಪಡೆದು ಲಕ್ಷಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಭಗವದ್ಗೀತೆಯ ೧೦ ಶ್ಲೋಕಗಳನ್ನು ಪಠಿಸಲಿದ್ದಾರೆ. ಈ ಧಾರ್ಮಿಕ ಉತ್ಸವದಲ್ಲಿ ಒಂದು ಲಕ್ಷ ಭಕ್ತರು ಭಾಗವಹಿಸಲಿದ್ದು, ಒಂದೇ ಸಮಯದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಲಿದ್ದಾರೆ.ಇದಾದ ಬಳಿಕ ಮೋದಿ ಅವರು ಮಧ್ಯಾಹ್ನ ೧.೩೫ ಕ್ಕೆ ಉಡುಪಿ ಹೆಲಿಪ್ಯಾಡ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಅಲ್ಲಿಂದ ಮಧ್ಯಾಹ್ನ ೨ ಗಂಟೆಗೆ ಗೋವಾಕ್ಕೆ ತೆರಳಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಕಾರ್ಯದರ್ಶಿಗೆ ಪ್ರಧಾನಿ ಕಚೇರಿ ಸೂಚಿಸಿದೆ. ಭದ್ರತಾ ವ್ಯವಸ್ಥೆಗಳ ಕುರಿತು ಎಸ್ಪಿಜಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸಂಘಟಕರಿಗೆ ಸೂಚಿಸಲಾಗಿದೆ.



