ಬೆಂಗಳೂರು: ಐಟಿ ವಲಯದಲ್ಲಿ ಪ್ರವರ್ತಕ ರಾಜ್ಯವಾಗಿರುವ ರಾಜ್ಯದ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಕೇಂದ್ರಗಳು ಮತ್ತು ಬಹುಖ್ಯಾತಿಯ ಇಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿ ವರ್ಷ ತನ್ನ ಉನ್ನತ ಅರ್ಹತೆ ಹೊಂದಿರುವ ತಾಂತ್ರಿಕ ಮಾನವ ಸಂಪನ್ಮೂಲಗಳೊಂದಿಗೆ ಸುಸಜ್ಜಿತಗೊಂಡ ಉನ್ನತ ಸ್ಥಾನ ಪಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಾಂಚಜನ್ಯ ವಿದ್ಯಾಪೀಠ ವೆಲ್ ಪೇರ್ ಟ್ರಸ್ಟ್ ಹಾಗೂ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಮಂಗಳವಾರ ಜೆ.ಪಿ.ಎನ್. ಸಭಾಂಗಣದಲ್ಲಿ ನಡೆದ ‘ಅಡ್ವಾನ್ಸ್ಡ್ ಇನ್ ಇನ್ಪರ್ಮೇಶನ್ ಟೆಕ್ನಾಲಜಿ, ಕಮ್ಯುನಿಕೇಷನ್ ಆಂಡ್ ಎನರ್ಜಿ ಸಿಸ್ಟಂಮ್ಸ್’ (ಎಐಟಿಸಿಇಎಸ್-2024) ಅಂತಾರಾಷ್ಟ್ರೀಯ ಬಹು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಐಟಿ ವಲಯದ ರಾಜಧಾನಿ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು ಪೇಟೆಗಳನ್ನು ನಿರ್ಮಾಣ ಮಾಡಿದ್ದು, ಇದು ಅಂದಿನ ಕಾಲದ ತಾಂತ್ರಿಕ ವಿನ್ಯಾಸ. ಈಗ ವಿಶೇಷ ಆರ್ಥಿಕ ವಲಯಗಳನ್ನಾಗಿ ವಿಂಗಡಿಸಲಾಗಿದೆ.ಆತ್ಮನಿರ್ಭರ ಭಾರತಕ್ಕೆ ಕರ್ನಾಟಕವೂ ಸಾಕಷ್ಟು ಬೆಂಬಲ ಸೂಚಿಸಿದೆ. ದೇಶದ ಐಟಿ ವಲಯಕ್ಕೆ ಬೆಂಗಳೂರು ಸಾಕಷ್ಟು ಕೊಡುಗೆ ನೀಡಿದೆ ಎಂದರು.
ದೇಶದ ಒಟ್ಟು ಐಟಿ ರಫ್ತಿನ ಶೇ.42ರಷ್ಟು ರಾಜ್ಯದಿಂದ ಮತ್ತು ಐಟಿ ರಫ್ತಿನಲ್ಲಿ ರಾಜ್ಯದ ಒಟ್ಟು ಕೊಡುಗೆ ಸುಮಾರು 3.25 ಲಕ್ಷ ಕೋಟಿ ರುಪಾಯಿಯಾಗಿದೆ. ರಾಜ್ಯವು ಹೊಸ ಐಟಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವುದನ್ನು ಮುಂದುವರೆಸಿದೆ. ಐಟಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಂಪನಿಗಳು ತೊಡಗಿಸಿಕೊಂಡಿವೆ ಎಂದರು.
ಭವಿಷ್ಯದ ಸವಾಲುಗಳನ್ನು ಮತ್ತು ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಎದುರಿಸಲು, ಕಾಲೇಜುಗಳಲ್ಲಿನ ಮಾನವ ಸಂಪನ್ಮೂಲವನ್ನು ಹೆಚ್ಚು ಉದ್ಯೋಗಾರ್ಹ ಮತ್ತು ತಾಂತ್ರಿಕವಾಗಿ ಮಾಡಲು ಹೊಸ ನೀತಿಗಳನ್ನು ರೂಪಿಸಲು ರಾಜ್ಯ ಸರ್ಕಾರವು ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಉನ್ನತ ಕೌಶಲ್ಯ ಸಲಹಾ ಸಮಿತಿಯನ್ನು ಸ್ಥಾಪಿಸಿದೆ ಎಂದು ತಿಳಿಸಿದರು.
ಸಮ್ಮೇಳನದ ಬಳಿಕ ನಡೆದ ಗೋಷ್ಠಿಗಳಲ್ಲಿ ಮಾಹಿತಿ ತಂತ್ರಜ್ಞಾನ, ಇಂಧನ ಕುರಿತು ಸಿಂಗಾಪುರ ನ್ಯಾಷನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ.ಜಿನ್-ಸಾಂಗ್ ಡಂಗ್, ಫ್ರಾನ್ಸ್ ಮೈನ್ಸ್ ಮತ್ತು ಟೆಲಿಕಾಂ ಪ್ರಾಧ್ಯಾಪಕ ಡಾ.ಬೆಸ್ಸನ್ ಅಬ್ದುಲ್ ರಜಾಕ್ ಅವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ ನ ಡಾ.ಹಾರ್ದಿಕ್ ಜೆ.ಪಾಂಡೆ, ಡಾ.ಎ.ಚೊಕ್ಕಲಿಂಗ, ರೋಪಾರ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ನಿತಿನ್ ಔಲುಕ್ ಇದ್ದರು.