ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ನ 10ನೇ ಆವೃತ್ತಿಯ ಫೈನಲ್ ಸೆಣಸಾಟಕ್ಕೆ ಹೈದರಾಬಾದ್ ಗಚ್ಚಿಬೌಲಿ ಕ್ರೀಡಾ ಸಂಕೀರ್ಣದಲ್ಲಿ ವೇದಿಕೆ ಸಿದ್ಧವಾಗಿದೆ. ಸತತ ಮೂರನೇ ಬಾರಿ ಫೈನಲ್ ಪ್ರವೇಶಿಸಿರುವ ಪುಣೇರಿ ಪಲ್ಟನ್ ಮತ್ತು ಮೊದಲ ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿರುವ ಹರಿಯಾಣ ಸ್ಟೀಲರ್ಸ್ ಕಿರೀಟಕ್ಕಾಗಿ ಶುಕ್ರವಾರ ಪೈಪೋಟಿ ನಡೆಸಲಿವೆ.
ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ, ಅಸ್ಲಂ ಇನಾಮದಾರ ಸಾರಥ್ಯದ ತಂಡವು ಸೆಮಿಫೈನಲ್ಗೆ ನೇರಪ್ರವೇಶ ಮಾಡಿತ್ತು. ನಾಲ್ಕರ ಘಟ್ಟದ ಪಂದ್ಯದಲ್ಲಿ 37-21 ರಿಂದ ಸುಲಭವಾಗಿ ಪಟ್ನಾ ಪೈರೇಟ್ಸ್ ತಂಡವನ್ನು ಹಿಮ್ಮೆಟ್ಟಿಸಿರುವ ಪಲ್ಟನ್ ತಂಡವು ಅಧಿಕಾರಯುತವಾಗಿ ಫೈನಲ್ ಪ್ರವೇಶಿಸಿದೆ. ಕಳೆದ ಎರಡೂ ಆವೃತ್ತಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದಿರುವ ಪುಣೇರಿ, ಈ ಬಾರಿ ಚೊಚ್ಚಲ ಕಿರೀಟ ಧರಿಸಲು ಒಂದು ಹೆಜ್ಜೆ ದೂರದಲ್ಲಿದೆ.