ರಾಮನಗರ: ನಗರದ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪ್ರಾರಂಭವಾಗಿದ್ದು ನಗರದೆಲ್ಲೆಡೆ ಇಂಗ್ಲೀಷ್ ಜಾಹೀರಾತು ಫಲಕ ರಾರಾಜಿಸುತ್ತಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷರಾದ ಜಗದೀಶ್ ಮಾತನಾಡಿ ಸರ್ಕಾರದ ಆದೇಶದ ಪ್ರಕಾರ ಕನ್ನಡ ಅಕ್ಷರಗಳು ಶೇ. 60ರಷ್ಟು ದೊಡ್ಡದಾಗಿ ಇರಬೇಕು. ಇಂಗ್ಲಿಷ್ ಅಕ್ಷರಗಳು ಶೇ. 40ರಷ್ಟು ಸಣ್ಣದಾಗಿ ಇರಬೇಕು. ಈ ಎಲ್ಲ ನಿಯಮಗಳನ್ನು ಮೀರಿ ಇಂಗ್ಲಿಷ್ ಜಾಹೀರಾತು ಫಲಕಗಳೇ ನಗರದಾದ್ಯಂತ ರಾರಾಜಿಸುತ್ತಿವೆ. ಕನ್ನಡ ನಾಮಫಲಕಗಳು ಇಲ್ಲದಂತೆ ಆಗಿದೆ. ಆದ್ದರಿಂದ ಎಲ್ಲ ಶಾಲೆಗಳಿಗೆ ಬಿಇಒ ಕಚೇರಿ ಮೂಲಕ ನೋಟಿಸ್ ಜಾರಿ ಮಾಡಿ ಕೂಡಲೇ ಇಂಗ್ಲಿಷ್ ಜಾಹೀರಾತುಗಳನ್ನು ತೆಗೆದು ಕನ್ನಡ ಜಾಹೀರಾತು ಫಲಕ ಅಳವಡಿಸಿಕೊಳ್ಳಲು ಸೂಚಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಎಂಎನ್ಆರ್ ರಾಜು ಮಾತನಾಡಿ ಖಾಸಗಿ ಶಾಲೆಯವರಿಗೆ ಕನ್ನಡ ನೆಲ, ಜಲ ಎಲ್ಲವೂ ಬೇಕು ಆದರೆ ಖಾಸಗಿ ಶಾಲೆಯವರು ಕನ್ನಡದ ಬದಲು ಇಂಗ್ಲಿಷ್ ಜಾಹೀರಾತು ಫಲಕಗಳನ್ನು ಅಳವಡಿಸುತ್ತಿರುವುದು ಖಂಡನೀಯ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು, ಖಾಸಗಿ ಶಾಲೆಯವರಿಗೆ ಯಾವುದೇ ಭಯ ಇಲ್ಲದಂತಾಗಿದೆ ಕಾರಣ ನಮ್ಮ ಅಧಿಕಾರಿಗಳಿಂದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಗ್ಲಿಷ್ ನಾಮಫಲಕಗಳ ಪ್ರದರ್ಶನ ವನ್ನು ಸಹಿಸುವುದಿಲ್ಲ ನಾವು ಯಾವುದೇ ದುರುದ್ದೇಶದಿಂದ ಯಾವುದೇ ಹೋರಾಟ ಮಾಡುತ್ತಿಲ್ಲ ನಮ್ಮ ಸ್ವಂತ ಹಣ ಖರ್ಚು ಮಾಡಿ ಕನ್ನಡ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ, ಕನ್ನಡದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿದರು.
ಕರವೇ ಸ್ವಾಭಿಮಾನಿ ಬಣ ರಾಜ್ಯ ಉಸ್ತುವಾರಿ ಅಧ್ಯಕ್ಷರಾದ ಶಿವುಗೌಡ ಮಾತನಾಡಿ ಅಧಿಕಾರಿಗಳು ಖಾಸಗಿ ಶಾಲೆಗಳಿಂದ ಹಣ ಪಡೆದು ಯಾವುದೇ ಕ್ರಮ ವಹಿಸದೆ ಕಂಡರು ಕಾಣದಂತೆ ಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ಇನ್ನು ನಗರಸಭೆ ಅಧಿಕಾರಿಗಳು ಸಹ ಕನ್ನಡದ ವಿಚಾರದಲ್ಲಿ ಬೇಜವಾಬ್ದಾರಿ ಅನುಸರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರಲ್ಲದೆ ಶೇ. 60ರಷ್ಟು ಕನ್ನಡ ಬಳಸದ ಖಾಸಗಿ ಶಾಲೆಗಳ ಬ್ಯಾನರ್ಗಳಿಗೆ ನಗರಸಭೆ ಅನುಮತಿ ಕೊಡ ಬಾರದು, ಇಂಗ್ಲಿಷ್ ನಾಮಫಲಕಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಕರುನಾಡ ಸೇನೆ ರಾಜ್ಯ ಉಸ್ತುವಾರಿ ಗಂಗಾಧರ್, ಜಿಲ್ಲಾಧ್ಯಕ್ಷ ಜಯಕುಮಾರ್, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ಕರುನಾಡ ಕುಮಾರ್, ಆರ್ಬಿಎಲ್ ಲೋಕೇಶ್, ವಿಜಯ್ಕುಮಾರ್ ಸಿ.ಎಂ, ಜಯರಾಮು, ಚೇತನ್ ಕುಮಾರ್, ಪ್ರಸನ್ನ, ಪ್ರದೀಪ್, ವಿನೋದ್ ಸೇರಿದಂತೆ ಇನ್ನಿತರರು ಇದ್ದರು.
ಜಾಹೀರಾತು ಫಲಕಗಳಲ್ಲಿ ಕನ್ನಡ ಮಾಯ ಖಾಸಗಿ ಶಾಲೆಗಳಿಗೆ ಕನ್ನಡ ಪರ ಸಂಘಟನೆಗಳ ಎಚ್ಚರಿಕೆ



