ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಘಟನೆ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಕಳೆದ ರಾತ್ರಿ ನಡೆದಿದ್ದು ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದAತಿದೆ.
ಕಲ್ಲು, ಚಪ್ಪಲಿ ತೂರಾಟ ಹಿನ್ನೆಲೆ ಫೆ.೨೪ರ ಮಧ್ಯರಾತ್ರಿವರೆಗೆ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶಾಂತವಾಗಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಿದ್ದಾರೆ ಎಂದು ಹಿಂದೂ ಸಂಘಟನೆಗಳ ನಾಯಕರು ದೂರಿದ್ದಾರೆ. ಮೆರವಣಿಗೆ ಸಾಗುತ್ತಿದ್ದ
ವರ ಮೇಲೆ ಮಸೀದಿ ಕಡೆಯಿಂದ ಕಲ್ಲು ಬಂದಿದೆ.ನಮ್ಮ ಕಾರ್ಯಕರ್ತರ ಜೊತೆಗೆ ಎಸ್ಪಿ, ಪೊಲೀಸರ ಮೇಲೂ ಕಲ್ಲು ಬಿದ್ದಿದೆ ಎಂದು ಹಿಂದೂ ಮುಖಂಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕಲ್ಲು ತೂರಿದ ಬೆನ್ನಲ್ಲೇ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಭಾವಚಿತ್ರ ಮೆರವಣಿಗೆಯಲ್ಲಿ ಹಿಂದೂ ಸಂಘಟನೆ ಮುಖಂಡರು
ಸಾಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಾಟ ನಡೆಸಿದರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ಓರ್ವ ಸಾರ್ವಜನಿಕರಿಗೆ ಗಾಯವಾಗಿರುವ ಮಾಹಿತಿ ಇದ್ದು, ಕಲ್ಲು ತೂರಾಟ
ಹಿನ್ನೆಲೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ
ವಾಗಿದೆ.
ಘಟನೆ ನಡೆದ ಮರು ಕ್ಷಣವೇ ಜನರನ್ನು ಚದುರಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದು,
ಮುಂಜಾಗೃತಾ ಕ್ರಮವಾಗಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ದೇಗುಲ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಾವುದೇ ಅನಾಹುತ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
`೮ ಮಂದಿ ಆರೋಪಿಗಳು ಬಂಧನ’
ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು ೮ ಮಂದಿಯನ್ನು ಬಂಧಿಸಿದ್ದಾರೆ.
ತನ್ವೀರ್ (೨೮) , ಮುಜ್ಜು (೨೩), ಸದ್ದಾಂ(೨೨), ಫಯಾಜ್(೨೪), ಸರ್ಫರಾಜ್(೩೩), ರಿಯಾನ್(೨೧), ಅಯಾನ್(೧೯), ವಸೀಮ್(೨೨) ಬಂಧನಕ್ಕೆ ಒಳಗಾದ ಆರೋಪಿಗಳು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, ವಿಡಿಯೋ ದೃಶ್ಯಗಳನ್ನು ಆಧಾರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನಾವು ಆರೋಪಿಗಳನ್ನು ಬಂಧಿಸಿದ್ದೇವೆ. ರಾತ್ರಿ ೧೦:೦೬ಕ್ಕೆ ಕಲ್ಲು ಎಸೆಯಲಾಗಿದೆ. ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ ೭ ಮಂದಿ ಮೇಲೆ ಕೇಸ್ ದಾಖಲಿಸಿದ್ದೇವೆ ಎಂದರು.
ಡಿಜೆ ವಿಚಾರಕ್ಕೆ ಗಲಾಟೆ ನಡೆದಿಲ್ಲ. ಕಲ್ಲು ಮತ್ತು ಚಪ್ಪಲಿ ಎಸೆಯಲಾಗಿದೆ. ರಾತ್ರಿ ೯:೩೦ಕ್ಕೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಕೆಲವರು ಅಲ್ಲೇ ಉಳಿದುಕೊಂಡಿದ್ದರು. ಉಳಿದುಕೊಂಡ ವ್ಯಕ್ತಿಗಳ ಪೈಕಿ ತನ್ವೀರ್ ಕಲ್ಲು ಎಸೆದಿದ್ದಾನೆ ಎಂದು ಸಿದಾರ್ಥ್ ಗೋಯಲ್ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಎಸ್ಪಿ, ತನ್ವೀರ್ ಉದ್ದೇಶಪೂರ್ವಕವಾಗಿಯೇ ಕಲ್ಲು ಎಸೆದಿದ್ದು ನಮ್ಮ ಇಬ್ಬರು ಕಾನ್ಸ್ಟೇಬಲ್ ಮತ್ತು ನನ್ನ ಮೇಲೆ ಬಿದ್ದಿತ್ತು. ನಾವೆಲ್ಲರೂ ಹೆಲ್ಮೆಟ್ ಹಾಕಿದ್ದರಿಂದ ಯಾವುದೇ ಗಂಭೀರ ಗಾಯವಾಗಿಲ್ಲ. ಮಸೀದಿಯಿಂದ ಕಲ್ಲು ಎಸೆದಿದ್ದು ನಮ್ಮ ವಿಡಿಯೋದಲ್ಲೂ ಸೆರೆಯಾಗಿದೆ ಎಂದು ತಿಳಿಸಿದರು.
ಒಬ್ಬನೇ ವ್ಯಕ್ತಿ ಎರಡು ಕಲ್ಲು ಎಸೆದಿದ್ದಾನೆ. ಬಂದನಕ್ಕೆ ಒಳಗಾದ ೮ ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತೇವೆ. ಎರಡೂ ಗುಂಪಿನ ಹಿರಿಯರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.



