ದಾವಣಗೆರೆ: ಒಬ್ಬ ವ್ಯಕ್ತಿ ಸಮಾಜದಲ್ಲಿ ಬದುಕಲು ಅತ್ಯವಶ್ಯಕವಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾನವ ಹಕ್ಕುಗಳ ಪಾಲನೆ ಮತ್ತು ರಕ್ಷಣೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ. ಮ ಕರೆಣ್ಣವರ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಸಂಸ್ಥೆ ನೀಡಿರುವ ಎಲ್ಲರಿಗೂ ಸ್ವಾತಂತ್ರ್ಯ ಸಮಾನತೆ ಮತ್ತು ನ್ಯಾಯ ಎಂಬ ಘೋಷವಾಕ್ಯದೊಂದಿಗೆ ಇಂದು 75ನೇ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ಎರಡನೇ ಮಹಾಯುದ್ಧದ ನಂತರವೂ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಯುದ್ಧ, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮಾನವರನ್ನು ಪಶುಗಳಂತೆ ದುಡಿಸಿಕೊಳ್ಳುವ ಪರಿಸ್ಥಿತಿಯಿತ್ತು, ಇದನ್ನು ಮನಗಂಡ ವಿಶ್ವ ಸಂಸ್ಥೆ ಪ್ಯಾರೀಸ್ ಅಧಿವೇಶನದಲ್ಲಿ ಮಾನವ ಹಕ್ಕು ಎಂಬ ಪರಿಕಲ್ಪನೆ ಕುರಿತು ಚರ್ಚಿಸಿ, 1948 ಡಿಸೆಂಬರ್ 10 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳನ್ನು ಸಾರ್ವತ್ರಿಕವಾಗಿ ಘೋಷಿಸಿತು.
ಅಂದಿನಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಘನತೆಯಿಂದ ಜೀವಿಸಲು ಅರ್ಹತೆ ಹೊಂದಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ಪ್ರತಿಯೊಬ್ಬ ನಾಗರೀಕನು ಶೋಷಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಮಾತನಾಡಿ ಮನುಷ್ಯ ಅರ್ಥಪೂರ್ಣ ಹಾಗೂ ತೃಪ್ತಿದಾಯಕ ಜೀವನವನ್ನು ನಿರ್ಭೀತಿಯಿಂದ ನಡೆಸಲು ಮಾನವ ಹಕ್ಕುಗಳು ಅತ್ಯವಶ್ಯಕವಾಗಿವೆ.
ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅಲೆಕ್ಸಾಂಡರ್ ಕಾಲದಿಂದಲೂ ಮನುಷ್ಯ ಭಯ, ಭೀತಿಯಿಂದ ಬದುಕುವ ಸಂದರ್ಭಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ನಾಗರಿಕತೆಗಳ ಕಾಲದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, 1948 ರಿಂದ ಇಲ್ಲಿಯವರೆಗೆ ಸಂವಿಧಾನಿಕ ರಕ್ಷಣೆಯನ್ನು ಮಾನವ ಹಕ್ಕುಗಳಿಗೆ ನೀಡಲಾಗಿದೆ.
ಮಾನವ ಹಕ್ಕುಗಳಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಮನುಷ್ಯ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಂಪೂರ್ಣ ಅವಕಾಶ ನೀಡಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಕಂಡುಬಂದರೆ ಅವರಿಗೆ ನ್ಯಾಯ ಒದಗಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಎಲ್.ಹೆಚ್, ಕಾನೂನು ಸಲಹೆಗಾರರಾದ ಹಾಲಪ್ಪ ಉಪಸ್ಥಿತರಿದ್ದರು.