ಗುಂಡ್ಲುಪೇಟೆ: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ಹಳೆ ಪ್ರವಾಸಿ ಮಂದಿರದಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹಾಕಿದರು.
ನಂತರ ಎಂ.ಡಿ.ಸಿ.ಸಿ ಬ್ಯಾಂಕ್ ವೃತ್ತದ ಬಳಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ರಾಜ್ಯ ಸರ್ಕಾರ ಕಳೆದ ಎರಡು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಮಾರಾಟ ತೆರಿಗೆಯನ್ನು ಹೆಚ್ಚಿಸಿರುವುದರಿಂದ ರೈತರಿಗೆ ಬಹಳ ತೊಂದರೆಯಾಗಿದೆ,
ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರ್ಯಾಕ್ಟರ್ ಮಾಲೀಕರು ಡಿಸೇಲ್ ದರ ಹೆಚ್ಚಳದಿಂದ ಬಾಡಿಗೆಯನ್ನು 100ರಿಂದ 150 ರೂಪಾಯಿ ಹೆಚ್ಚಳ ಮಾಡುತ್ತಾರೆ ಇದರಿಂದ ರೈತನ ಮೇಲೆ ಅಧಿಕ ಹೊರೆ ಬಿದ್ದಂತಾಗಿದೆ ಹಾಗೂ ಇಂಧನ ದರ ಏರಿಕೆಯಿಂದ ಸರಕು ಸಾಗಾಣೆ ವಾಹನಗಳು ಬಾಡಿಗೆಯನ್ನು ಹೆಚ್ಚಿಸುವುದರಿಂದ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ ಇದರಿಂದ ಮಧ್ಯಮ ವರ್ಗದ ಜನರಿಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ ಇದನ್ನು ಮನಗಂಡು ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
2022-23 ಮತ್ತು 24ನೇ ಸಾಲಿನಲ್ಲಿ ತೀವ್ರ ಬರಗಾಲವನ್ನು ಅನುಭವಿಸಿದ್ದೆವೆ,ರಾಜ್ಯ ಸರ್ಕಾರ ಸುಮಾರು 126 ತಾಲ್ಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿದೆ ಇ ಎರಡು ವರ್ಷಗಳಲ್ಲಿ ರೈತರು ಫಸಲ್ ಭೀಮಾ ಯೋಜನೆಯಡಿ ಬೆಳೆಯ ವಿಮೆಯನ್ನು ಪಾವತಿ ಮಾಡಿದ್ದಾರೆ ಹಾಗೂ ಕಳೆದ ಪೂರ್ವ ಮುಂಗಾರು ಅವಧಿಯಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ ಇದರ ವರದಿಯನ್ನು ತೋಟಗಾರಿಕೆ ಇಲಾಖೆ ಈಗಾಗಲೇ ವರದಿ ತಯಾರಿಸಿ ಕಂದಾಯ ಇಲಾಖೆಗೆ ನೀಡಲಾಗಿದೆ ಆದರ ಬರಪರಿಹಾರ ಲಾಗಿನ್ ತೆರೆಯದ ಕಾರಷ ದತ್ತಾಂಶ ನಮೂದಿಸಲು ಸಾಧ್ಯವಾಗಿಲ್ಲ ಇದರಿಂದ ರೈತರಿಗೆ ದೊರೆಯಬೇಕಾದ ಪರಿಹಾರ ಹಣ ಬರಲು ವಿಳಂಬವಾಗಿದೆ ಹಾಗಾಗಿ ಸರ್ಕಾರ ಕೂಡಲೇ ಲಾಗಿನ್ ತೆರೆಯಬೇಕೆಂದು ಆಗ್ರಹಿಸಿದರು.
ಚಲನಚಿತ್ರ ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿರುವ ಪ್ರಕರಣ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆಯಾಗಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಹೇಳಿದರು.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರಮೇಶ್ ಬಾಬು ಬರಪರಿಹಾರ ಲಾಗಿನ್ ರಾಜ್ಯದ್ಯಾಂತ ಏಕಕಾಲದಲ್ಲಿ ತೆರೆಯಲಿದ್ದು ನಂತರ ಪರಿಹಾರ ರೈತರ ಖಾತೆಗಳಿಗೆ ನೇರವಾಗಿ ಜಮಾವಾಗಲಿದೆ ಹಾಗೂ ಇಂಧನ ದರ ಹೆಚ್ಚಳಕ್ಕೆ ಸಂಬಂಧಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಹೇಂದ್ರ, ಜವರಶೆಟ್ಟಿ, ನಾಗರಾಜು,ರವಿಕುಮಾರ್, ರಾಜು,ರಂಗಸ್ವಾಮಿ,ಮಹದೇಶ್, ರವಿಚಂದ್ರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.