ಮಾಗಡಿ: ತಾಲ್ಲೂಕಿನಲ್ಲಿ ಕೆಶಿಪ್ ರಸ್ತೆ ಕಾಮಗಾರಿ ವಿಳಂಬ,ಹೈ ಟೆನ್ಸನ್ ಲೈನ್ ಅಳವಡಿಕೆ ಪರಿಹಾರ,ಪುರಸಭೆ ಅಧಿಕಾರಿಗಳ ದುರಾಢಳಿತ, ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘದ ವತಿಯಿಂದ ಪಟ್ಟಣದ ಸೋಮೇಶ್ವರ ಸರ್ಕಲ್ ಬಳಿಯಲ್ಲಿ ರೈತ ಮುಖಂಡರು ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಪ್ರಾರಂಭವಾಗಿ ಒಂದೂವರೆ ಗಂಟೆಯಾದರೂ ಪೊಲೀಸರು ಹೊರತುಪಡಿಸಿ ಸಂಭಂದಪಟ್ಟ ಯಾವೊಬ್ಬ ಅಧಿಕಾರಿಗಳು ಭಾರದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿ ರಸ್ತೆಯಲ್ಲಿಯೇ ರೈತ ಮುಖಂಡರು ಮಲಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವಿಕೋಪಕ್ಕೆ ಹೋಗುವುದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಉಪ ತಹಶೀಲ್ದಾರ್ ಶರತ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಮನವೊಲಿಸಲು ಪ್ರಯತ್ನಿಸಿದಾಗ ಇದಕ್ಕೆ ಒಪ್ಪದ ರೈತ ಸಂಘಟನೆಯ ಅದ್ಯಕ್ಷ ಹೊಸಪಾಳ್ಯ ಲೋಕೇಶ್ ಯುವ ಘಟಕದ ಅದ್ಯಕ್ಷ ರವಿಕುಮಾರ್ ಸೇರಿದಂತೆ ಇನ್ನಿತರೆ ಮುಖಂಡರನ್ನು ಪೊಲೀಸರು ಬಂಧಿಸಲು ಮುಂದಾದಾಗ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತದನಂತರ ಪೊಲೀಸರ ಮನವೊಲಿಕೆಗೆ ಒಪ್ಪಿದ ರೈತ ಮುಖಂಡರು ಡಿಸೆಂಬರ್ 15 ರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.ರೈತರ ಪ್ರತಿಭಟನೆಗೆ ಸ್ಪಂದಿಸಲು ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆದ ಪರಿಣಾಮ ನೂರಾರು ಬಸ್ ಸೇರಿದಂತೆ ಆಟೋ ಬೈಕ್ ಸವಾರರಿಗೆ ಪ್ರತಿಭಟನೆಯ ಬಿಸಿ ತಟ್ಟಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ರೈತಸಂಘದ ಅದ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ ತಿಪ್ಪಗೊಂಡನಹಳ್ಳಿಯಿಂದ ಅಂಚೇಪಾಳ್ಯದವರೆಗೆ ರೈತರ ಜಮೀನಿನ ಮೇಲೆ 64 ಕೆವಿ ಹೈ ಟೆನ್ಸನ್ ಲೈನ್ ಹಾದು ಹೋಗಿದೆ.ಇದರಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರ ಗಿಡಗಳು ಬೆಳೆಯಲಾರದ ಪರಿಸ್ಥಿತಿಯಿದೆ.ಈ ಸಂಭಂದ ನೆಲಮಂಗಲದಲ್ಲಿರುವ ಕಚೇರಿಗೆ ತೆರಳಿದರೆ ರೈತರನ್ನು ಗೇಟ್ ಒಳಗಡೆ ಬಿಡಲ್ಲ. ತರಕಾರಿ ಮಾರುಕಟ್ಟೆ ಇಲ್ಲದೆ ರೈತರ ಬೆಳೆಗಳಿಗೆ ಬೆಲೆ ಇಲ್ಲ. ಮಾಗಡಿ ಸರಕಾರಿ ಬಸ್ಸುಗಳು ನಿಗಧಿತ ಸಮಯಕ್ಕೆ ಬಾರದಿರುವುದರಿಂದ ಬಹುತೇಕ ಮಂದಿ ತೊಂದರೆಗೀಡಾಗಿದ್ದಾರೆ.
ಹಳೇ ಬಸ್ಸುಗಳ ಓಡಾಟದಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ದುಸ್ಥಿತಿಯಿದೆ.ಕೆಶಿಪ್ ರಸ್ತೆ ನಿರ್ಮಾಣ ಮಾಡುತ್ತಿರುವ ಬಹುತೇಕ ಕಡೆಗಳಲ್ಲಿ ತಡೆಗೋಡೆ ನಿರ್ಮಿಸುತಿಲ್ಲ.ಕೆಂಪೇಗೌಡರು ತಮ್ಮ ಪತ್ನಿ ಹೆಸರಿನಲ್ಲಿ ನಿರ್ಮಿಸಿರುವ ಭರ್ಗಾವತಿ ಕೆರೆಗೆ ಪಟ್ಟಣದ ಕೊಳಚೆ ನೀರು ಸೇರುತ್ತಿರುವುದರಿಂದ ಆ ಭಾಗದ ಜನರು ಕುಡಿಯುವ ನೀರು ವಿಷಪೂರಿತವಾಗಿದೆ. ಈ ಬಗ್ಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ನಮ್ಮ ಹೋರಾಟವನ್ನು ಕೇವಲ ನೆಪಮಾತ್ರಕ್ಕೆ ಅಧಿಕಾರಿಗಳು ತೆಗೆದುಕೊಂಡಿದ್ದಾರೆಯೇ ಹೊರತು ಗಂಭೀರವಾಗಿ ಪರಿಗಣಿಸಿಲ್ಲ.ನಮ್ಮ ಹೋರಾಟ ಜನಪರವಾಗಿದೆಯೇ ಹೊರತು ಸ್ವಾರ್ಥಕ್ಕಲ್ಲ ಎಂದ ಅವರು ಇನ್ನು ಹತ್ತು ದಿನಗಳ ಗಡುವು ನೀಡಲಾಗಿದೆ. ಸಂಭಂದಪಟ್ಟ ಅಧಿಕಾರಿಗಳು ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡದಿದ್ದರೆ ಇದೇ ಸೋಮೇಶ್ವರ ಸರ್ಕಲ್ಲಿನಲ್ಲಿ ಮತ್ತೆ ರಸ್ತೆ ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ಲೋಕೇಶ್ ಎಚ್ಚರಿಕೆ ನೀಡಿದರು.
ಹೈರಾಣಾದ ಪ್ರಯಾಣಿಕರು: ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಪ್ರತಿಭಟನೆಯು ಸುಮಾರು ಎರಡು ಗಂಟೆಗಳ ಕಾಲ ನಡೆದ ಪರಿಣಾಮ ಹುಲಿಯೂರುದುರ್ಗ, ಕುಣಿಗಲ್ ಸೇರಿದಂತೆ ಮತ್ತಿತರ ಕಡೆಗಳಿಗೆ ತೆರಳಲು ಕಾದಿದ್ದ ಪ್ರತಿಭಟನೆಯ ಬಿಸಿಯಿಂದಾಗಿ ಪ್ರಯಾಣಿಕರು ಹೈರಾಣಾದ ಘಟನೆ ನಡೆಯಿತು.ಯುವ ಘಟಕದ ಅದ್ಯಕ್ಷ ರವಿಕುಮಾರ್, ಶಿವಲಿಂಗಯ್ಯ, ಧನಂಜಯ,ಬುಡಾನ್ ಸಾಬ್, ಕರೇನಹಳ್ಳಿ ಲೋಕೇಶ್, ಕಾಂತರಾಜು, ರಘು, ಬಾಳೇಕಾಯಿ ನಿಂಗಣ್ಣ, ಚನ್ನರಾಯಪ್ಪ, ರಂಗಸ್ವಾಮಯ್ಯ, ದಾಸಪ್ಪ, ಮುನಿರಾಜು, ಷಡಕ್ಷರಿ ಸೇರಿದಂತೆ ಮತ್ತಿತರಿದ್ದರು.