ನೆಲಮಂಗಲ: ಗ್ರಾಮಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡಲು ಕೆಐಎಡಿಬಿ ಅಧಿಕಾರಿಗಳು ಅಡ್ಡಿ ಮಾಡುತ್ತಿದ್ದಾರೆ, ನಮ್ಮ ಪ್ರಾಣ ಬಿಡುತ್ತೇವೆ ಆದರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ ಎಂದು ಸೋಂಪುರ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.
ತಾಲೂಕಿನ ಹನುಮಂತಪುರ, ಬಿದಲೂರು, ಕೋಡಿಪಾಳ್ಯ ಗ್ರಾಮಗಳ 482 ಎಕರೆ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭ ಮಾಡುವ ಮೊದಲೆ ಸ್ಥಳೀಯ ಕೆಲ ಮುಖಂಡರ ಜತೆ ಕೈಜೋಡಿಸಿ ಕೃಷಿಚಟುವಟಿಕೆಗಳನ್ನು ನಿಲ್ಲಿಸಲು ಮುಂದಾದ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ರೈತರು ತಿರುಗು ಬಿದ್ದಿದ್ದು ಮಂಗಳವಾರ ಕೆರೆಕತ್ತಿಗನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 48 ಪಕ್ಕದಲ್ಲಿಯೇ ಪತ್ರಿಕಾಗೋಷ್ಟಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಯಾವುದೇ ನೋಟಿಸ್ ನೀಡದೆ, ಪತ್ರಿಕಾ ಪ್ರಕಟಣೆಯು ನೀಡದೆ ನಮ್ಮ ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಭೂಸ್ವಾಧೀನ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು ಈ ಗ್ರಾಮಗಳ ವಾಸ್ತವ ಸತ್ಯವನ್ನು ಸರಕಾರ ಗಮನಿಸಬೇಕು, ಬೆಂಗಳೂರು ನಗರಕ್ಕೆ ಲಾರಿಗಳಷ್ಟು ತರಕಾರಿ ಹಾಗೂ ಕೃಷಿವಸ್ತುಗಳನ್ನು ನೀಡುವ ಫಲವತ್ತಾದ ಭೂಮಿಯನ್ನು ಬಂಜರು ಮಾಡಲು ಮುಂದಾಗಿರುವುದು ಕೆಐಎಡಿಬಿ ಇಲಾಖೆಯ ನಿರ್ಧಾರ ಸರಿಯಲ್ಲ ನಮ್ಮ ಪ್ರಾಣ ಬಿಡುತ್ತೇವೆ ಆದರೆ ನಮ್ಮ ಭೂಮಿ ನೀಡುವುದಿಲ್ಲ ಇದು ಆರಂಭ ಮುಂದಿನ ದಿನಗಳಲ್ಲಿ ವಿಧಾನಸೌಧ ಮುಟ್ಟುವವರೆಗೂ ಉಗ್ರ ಹೋರಾಟ ಮಾಡುತ್ತಿವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ಎಚ್ಚರಿಕೆ ನೀಡಿದರು.
ರೈತಸಂಘಟನೆ ತಾಲೂಕು ಅಧ್ಯಕ್ಷ ರಾಜೇಶ್ ಮಾತನಾಡಿ, ಬಿದಲೂರು, ಕೋಡಿಪಾಳ್ಯ ಹಾಗೂ ಹನುಮಂತಪುರ ಗ್ರಾಮಗಳ ಸುತ್ತಮುತ್ತಲನ ಭೂಮಿ ಫಲವತ್ತಾಗಿದ್ದು, ಕೃಷಿ ಯೋಗ್ಯ ಭೂಮಿಯಾಗಿದೆ. ಸುಮಾರು 200 ಎಕರೆಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ರೈತರ ಬದುಕನ್ನು ಹಾಳು ಮಾಡಲು ಕೆಐಎಡಿಬಿ ಹೊರಟಿದೆ. ರಾಜ್ಯ ಸರಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಮೊದಲು ರೈತರ ಜತೆ ಮಾತನಾಡಬೇಕು. ನಾವು ಭೂಮಿ ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಹೊರಾಟ ನಡೆಸುತ್ತೇವೆ.
ಭೂಸ್ವಾದೀನ ಮಾಡಿದನಂತರ ಕೃಷಿ ಭೂಮಿಯಲ್ಲಿರುವ ಗಿಡಮರಗಳಿಗೆ ಪರಿಹಾರದ ಹಣ ನೀಡುವುದು ರೈತನ ಬ್ಯಾಂಕ್ ಖಾತೆಗೆ ಬರುತ್ತದೆ. ಬೇರೆ ಯಾವುದೇ ವ್ಯಕ್ತಿಗಳ, ಅಧಿಕಾರಿಗಳ ಖಾತೆಗೆ ಹೋಗುವುದಿಲ್ಲ, ಕೆಲ ಸ್ಥಳೀಯ ಮುಖಂಡರು ರೈತರನ್ನು ಬೋಕರ್ ಎಂದಿರುವುದು ಖಂಡನೀಯ, ಬಹಿರಂಗವಾಗಿ ಕ್ಷಮೆ ಕೇಳಬೇಕುಕೃಷಿ ಚಟುವಟಿಕೆಗೆ ತೊಂದರೆ ಮಾಡು ತ್ತಿರುವುದನ್ನು ನಿಲ್ಲಿಸುವಂತೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ರಾಜಭವನ ಚಲೋ ಮಾಡುವ ಮೂಲಕ ರಾಜ್ಯಪಾಲರಿಗೆ ಸಮಸ್ಯೆಯ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡರಾದ ಬಿದಲೂರು ಗಿರೀಶ್, ಕೆರೆಕತ್ತಿಗನೂರು ನಾಗೇಶ್, ಪ್ರಸನ್ನಕುಮಾರ್, ರುದ್ರೇಶ್, ಸಿದ್ದ ಗಂಗಯ್ಯ, ಕಂಬಾಳು ಗಾರೆಮನೆ ಮೂರ್ತಿ, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ಹನುಮಂತಪುರ, ಬಿದಲೂರು, ಕೋಡಿ ಪಾಳ್ಯದ ರೈತರು ಭಾಗವಹಿಸಿದ್ದರು.