ಕನಕಪುರ: ತಾಲೂಕು ಕನ್ನಡ ಪರ ಸಂಘಟನೆಗಳಿಂದ ನಗರದ ಹಲವಾರು ಅಂಗಡಿ ಮಳಿಗೆಗಳ ಮೇಲೆ ಅಳವಡಿಸಿದ್ದ ಆಂಗ್ಲ ಹಾಗೂ ಇನ್ನಿತರ ನಾಮಫಲಕಗಳಿಗೆ ಕಪ್ಪು ಮಸಿ ಬಳೆದು ಪ್ರತಿಯೊಬ್ಬ ಅಂಗಡಿ ಮಳಿಗೆಯವರು ಕಡ್ಡಾಯವಾಗಿ ಕನ್ನಡದಲ್ಲೇ ನಾಮಫಲಕವನ್ನು ಹಾಕುವಂತೆ ಪ್ರತಿಭಟನೆ ನಡೆಸಿದರು.
ಸೋಮವಾರ ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಕುಮಾರಸ್ವಾಮಿ, ವೀರೇಶ್, ಭಾಸ್ಕರ್ ಸೇರಿದಂತೆ ಅನೇಕರು ನಗರದ ಪೇಟೆಕೆರೆ ಸಮೀಪದ ಪ್ರತಿಷ್ಟಿತ ಶೋ-ರೂಂ ಮಳಿಗೆ ಮೇಲೆ ನಾಮಫಲಕಗಳು ಸಂಪೂರ್ಣ ಆಂಗ್ಲಭಾಷೆಯಲ್ಲಿ ಇದುದ್ದನ್ನು ಕಂಡು ತಾವು ತಂದಿದ್ದ ಕರಿ ಬಣ್ಣವನ್ನು ನಾಮಫಲಕಗಳ ಮೇಲೆ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಅಂಗಡಿ ಮಾಲೀಕರಿಗೆ ನಾಮಫಲಕವನ್ನು ಕನ್ನಡದಲ್ಲೇ ಹಾಕುವಂತೆ ಎಚ್ಚರಿಕೆ ನೀಡಿದರು. ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕದ ಎಂ.ಜಿ ರಸ್ತೆಯ ಎಲ್ಲಾ ಅಂಗಡಿ ಮಾಲೀಕರಿಗೆ ಕಡೇ ಎಚ್ಚರಿಕೆಯನ್ನು ನೀಡಿ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ನಗರಸಭೆ ಮುಂದೆ ಜಮಾಯಿಸಿ ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳ ಲೈಸನ್ಸ್ನ್ನು ರದ್ದುಗೊಳಿಸಬೇಕೆಂದು ಪ್ರತಿಭಟನೆ ನಡೆಸಿದರು.
ಮನವಿ: ಪ್ರತಿಭಟನಾ ಮುಖಂಡರುಗಳು ನಗರಸಭಾ ಆಯುಕ್ತ ಎಂ.ಎಸ್.ಮಹದೇವ್ರವರಿಗೆ ಮನವಿ ಪತ್ರವನ್ನು ನೀಡಿ ನಗರದಲ್ಲಿ ಕೆಲವು ಅಂಗಡಿಗಳ ಮಾಲೀಕರು ಎಷ್ಟೇ ಎಚ್ಚರಿಕೆ ನೀಡಿದರು ಕನ್ನಡದಲ್ಲಿ ನಾಮಫಲಕ ಹಾಕುತ್ತಿಲ್ಲ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಎಂದು ರಾಜ್ಯ ಸರ್ಕಾರ ಆದೇಶ ಹೊರಬಿದಿದ್ದರು ಸಹ ಕೆಲವು ಅಂಗಡಿ ಮಾಲೀಕರು ಇದನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಂತಹ ಅಂಗಡಿಗಳ ಲೈಸೆನ್ಸ್ಗಳನ್ನು ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕನ್ನಡ ಪರ ವೇದಿಕೆ ಮುಖಂಡರುಗಳಾದ ಜಯಸಿಂಹ, ಕೆ.ಆರ್.ಸುರೇಶ್, ಶೇಖರ, ರೈತ ಮುಖಂಡರಾದ ಚೀಲೂರು ಮುನಿರಾಜು, ಶ್ರೀನಿವಾಸ್, ಕೆಬ್ಬಳ್ಳಿ ಶಿವರಾಜು ಸೇರಿದಂತೆ ಕನ್ನಡ ಪರ ಸಂಗಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.