ಮೈಸೂರು: ಮೈಸೂರಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬಾಕಿ ಬರಬೇಕಿರುವ 24 ಕೋಟಿ ರೂಪಾಯಿ ಕೂಡಲೇ ಬಿಡುಗಡೆ ಮಾಡಿಸುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಮೈಸೂರಿನ ನಜರ್ಬಾದ್ನ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ನಡೆದ ರೈತರ ಸಭೆಯಲ್ಲಿ ಸಂಘ ಈ ತೀರ್ಮಾನ ಕೈಗೊಂಡಿತು. ಒಂದು ಟನ್ ಕಬ್ಬಿಗೆ 150 ರೂಪಾಯಿ ನೀಡುವಂತೆ ಸರ್ಕಾರ ಆದೇಶ ನೀಡಿತ್ತು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕೂಡ ಒಪ್ಪಿತ್ತು. ಆದರೆ ಈ ತನಕ ಹಣ ನೀಡಿಲ್ಲ. ಈ ಹಿನ್ನೆಲೆ ಒಂದು ವಾರದೊಳಗೆ ಸಕ್ಕರೆ ಕಾರ್ಖಾನೆಗೆ ಆದೇಶ ಮಾಡಿ ಹಣ ಕೊಡಿಸಲು ಗಡುವು ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಒಂದು ವೇಳೆ ವಾರದೊಳಗೆ ಹಣ ಬರದಿದ್ದರೆ ಮೈಸೂರಿನ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಬೇಡಿಕೆ ಈಡೇರುವ ತನಕ ಅಲ್ಲಿಂದ ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಚುನಾವಣೆಗೂ ಮುನ್ನ ರೈತರ ಪಂಪ್ ಸೆಟ್ಗಳಿಗೆ 10 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಆದರೆ ಈಗ 5 ಗಂಟೆ ಕೂಡ ವಿದ್ಯುತ್ ದೊರೆಯುತ್ತಿಲ್ಲ. ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ರೈತರು ಕಂಗಾಲಾಗಿದ್ದಾರೆ. ನುಡಿದಂತೆ ನಡೆಯುತ್ತೇವೆ ಎಂದು ಹೇಳುವ ಸರ್ಕಾರ ಈಗ ವಚನ ಭ್ರಷ್ಟವಾಗಿದೆ ಎಂದು ಇದೇ ಸಂದರ್ಭದಲ್ಲಿ ಕುರುಬೂರು ಶಾಂತಕುಮಾರ್ ಆರೋಪಿಸಿದರು. ಕೈಗಾರಿಕೆಗಳಿಗೆ ದಿನದ 24 ಗಂಟೆಯೂ ವಿದ್ಯುತ್ ನೀಡುವ ಸರ್ಕಾರ ಅನ್ನದಾತರಿಗೆ ಮಾತ್ರ ಮೋಸ ಮಾಡುತ್ತಿದೆ. ತಾರತಮ್ಯ ಮಾಡುತ್ತಿರುವ ಸರ್ಕಾರ ತನ್ನ ಧೋರಣೆ ಬದಲಿಸಬೇಕು.
ರೈತರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಕನ್ನಡ ರಾಜ್ಯೋತ್ಸವದ 50 ವರ್ಷಗಳ ಆಚರಣೆ ವೇಳೆ ಎಲ್ಲಾ ಕಂದಾಯ ಹಾಗೂ ಇತರೆ ಇಲಾಖೆಗಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವಾದ ಮಾಡಲು ಸರ್ಕಾರ ಆದೇಶ ನೀಡಬೇಕು. ಇದರಿಂದ ಆಂಗ್ಲ ಭಾಷೆ ತಿಳಿಯದ ರೈತರಿಗೆ ಅನುಕೂಲ ವಾಗುತ್ತದೆ.
ಇಂಗ್ಲಿಷ್ ಭಾಷೆಯ ಮೂಲಕ ರೈತರಿಗೆ ಮಾಡುತ್ತಿರುವ ಶೋಷಣೆ ಕೂಡ ತಪ್ಪುತ್ತದೆ ಎಂದು ಹೇಳಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವೆಂಬರ್ 6 ಮತ್ತು 7 ರಂದು ರಾಜಕಿಯೇತರ ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ಆಯೋಜಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೈತರ ನಿಲುವು ಏನು ಎಂದು ಅಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಪಿ. ಸೋಮ ಶೇಖರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಹಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರ ಶಂಕರ, ಕುರಬೂರು ಸಿದ್ದೇಶ್, ಹಾಡ್ಯ ರವಿ, ಪಟೇಲ್ ಶಿವಮೂರ್ತಿ, ಲಕ್ಷ್ಮಿ ಪುರ ವೆಂಕಟೇಶ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.