ಮಾಲೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡರ ಬಂಧನ ಖಂಡಿಸಿ ಮತ್ತು ಕರವೇ ಕಾರ್ಯ ಕರ್ತರನ್ನು ಶೀಘ್ರ ಬಿಡುಗಡೆ ಮಾಡಬೇಕಾಗಿ ಒತ್ತಾಯಿಸಿ ತಾಲೂಕು ಕರವೇ ಘಟಕದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿ ತಹಸಿಲ್ದಾರ್ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎಂಎಸ್ ಶ್ರೀನಿವಾಸ್ ಮಾತನಾಡಿ. ಕನ್ನಡ ಸೇನಾನಿ, ಕನ್ನಡಪರ ಚಿಂತಕ, ನಾಡ ಹೋರಾಟಗಾರ ಕನ್ನಡ ಚಳುವಳಿಯ ಭೀಷ್ಮ ಟಿ ನಾರಾಯಣಗೌಡರು ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕಟ್ಟಡಗಳು ಹಾಗೂ ಇನ್ನಿತರ ವ್ಯಾಪಾರ ಸ್ಥಳಗಳಲ್ಲಿ…
ಶೇಕಡ 60 ರಷ್ಟು ಕನ್ನಡ ನಾಮಪಲಕಗಳ ಕಡ್ಡಾಯವಾಗಿ ಬಳಸುವಂತೆ ಒತ್ತಾಯಿಸಿ ಸ್ಥಳೀಯ ಪ್ರಾಧಿಕಾರ ಹಾಗೂ ಬಿಬಿಎಂಪಿ ಮತ್ತು ಸರ್ಕಾರದ ಆದೇಶಗಳಿದ್ದರೂ ಸಹ ಸದರಿ ಆದೇಶಗಳನ್ನು ಉಲ್ಲಂಘನೆ ಮಾಡಿ ಆಂಗ್ಲ ಭಾಷೆಗಳಲ್ಲಿ ನಾಮಫಲಕಗಳನ್ನು ಹಾಕಿದ್ದು, ಸದರಿ ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಕಳೆದ ಸುಮಾರು 45 ದಿನಗಳಿಂದ ಕರವೇ ಕಾರ್ಯಕರ್ತರು ಬೆಂಗಳೂರು ನಗರದಲ್ಲಿ ಕರ ಪತ್ರಗಳನ್ನು ನೀಡಿ ಮನವಿಮಾಡಿದ್ದರು.
ಆದರೆ ನಾರಾಯಣಗೌಡರು ಮತ್ತು ಅವರ ಜೊತೆಯಲ್ಲಿ 29 ಜನ ಕಾರ್ಯಕರ್ತರನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡು ಟಿಎ ನಾರಾಯಣಗೌಡರು ಮೊಬೈಲನ್ನು ಕಸಿದಿರುವ ಡಿಸಿಪಿ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಟಿಎನಾರಾಯಣಗೌಡರನ್ನು ಬಿಡುಗಡೆಗೊಳಿಸಬೇಕು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕರವೇ ಅಧ್ಯಕ್ಷ ಲತಾಬಾಯಿ ಮಡಿಕ್, ತಾಲೂಕು ಯುವ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್, ತಾಲೂಕು ಘಟಕದ ಪದಾಧಿಕಾರಿಗಳಾದ ಡಿಸಿ ಚಂದ್ರಶೇಖರ್, ಶ್ರೀನಿವಾಸ್, ಮಾದೇಶ್, ರೆಡ್ಡಿ ಕುಮಾರ್, ನವೀನ್ ಕುಮಾರ್, ಆಯುಷ್ ಗೌಡ, ಪ್ರವೀಣ್, ಚೇತನ್, ಆನಂದ್ ಸೇರಿದಂತೆ ಇನ್ನಿತರರು ಇದ್ದರು.