ದೊಡ್ಡಬಳ್ಳಾಪುರ: ಒಳಚರಂಡಿ ಹಾಗೂ ಮೂಲ ಸೌಕರ್ಯ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಚಂದ್ರಮೌಳೇಶ್ವರ ಬಡಾವಣೆಯ ಸಾರ್ವಜನಿಕರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.2020 ರಿಂದಲೂ ನಿರಂತರವಾಗಿ ನಗರ ಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋ
ಜನವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ವಾರ್ಡ್ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡ ವಸಂತ್ ಕುಮಾರ್ ಮಾತನಾಡಿ, ಮಳೆಗಾಲದಲ್ಲಿ ಹೆಚ್ಚು ಸಮಸ್ಯೆ ಉಲ್ಭಣವಾಗುತ್ತಿದೆ. ತಾತ್ಕಾಲಿಕವಾಗಿ ಎಸ್ ಟಿ ಪಿ ಘಟಕವನ್ನು ಸರಿಪಡಿಸಿ ಜಾರಿಕೊಂಡಿರುವ ಅಧಿಕಾರಿಗಳು, ನಮಗೆ ಶಾಶ್ವತ ಪರಿಹಾರ ಕೊಡುವಲ್ಲಿ ವಿಫಲರಾಗಿದ್ದಾರೆ. ನಮಗೆ ಕೊಳಚೆ ನೀರಿನ ಸಮಸ್ಯೆಯಿಂದ ಶಾಶ್ವತ ಪರಿಹಾರ ಬೇಕಿದೆ. ಕೊಳಚೆ ನೀರು ಮನೆಯ ಮುಂಭಾಗ ಹರಿಯುವ ಕಾರಣ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಕೂಡಲೇ ನಗರಸಭಾ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಾದ ಸೌಮ್ಯ ಮಾತನಾಡಿ, ಮಳೆ ಹೆಚ್ಚಾದರೆ ಒಳಚರಂಡಿಯ ಕೊಳಚೆ ನೀರು ಮನೆಗೆ ನುಗ್ಗುತ್ತದೆ. ಕೊಳಚೆ ನೀರಿನ ದುರ್ವಾಸನೆಯಿಂದ ಮನೆಯಲ್ಲಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮಸ್ಯೆ ಅಧಿಕಾರಿಗಳ ಕಣ್ಣಿಗೆ ಕಾಣುತಿಲ್ಲ. ಮತ ಕೇಳಲು ಬರುವ ಜನಪ್ರತಿನಿಧಿಗಳು ಮೌನ ವಹಿಸಿರುವುದು ಸರಿಯಲ್ಲ. ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ಎಂಬುದೇ ನಮ್ಮೆಲ್ಲರ ಒತ್ತಾಯ ಎಂದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ವಡ್ಡರಹಳ್ಳಿ ಮಾತನಾಡಿ ಈ ಬಡಾವಣೆಯು 2005 ರಲ್ಲಿ ನಿರ್ಮಿಸಲಾಗಿದೆ. ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಪೈಪ್ ಲೈನ್ ಮಾಡಲಾಗಿದೆ. ಆದರೆ, ಬಡಾವಣೆ ತಗ್ಗಿನಲ್ಲಿರುವ ಕಾರಣ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಲು ಸ್ಥಳೀಯವಾಗಿ ಎಸ್ ಟಿ ಪಿ ಘಟಕದ ಸ್ಥಾಪನೆ ಮಾಡಿದ್ದೇವೆ. ಮಳೆ ಹೆಚ್ಚಾದಾಗ ಈ ಘಟಕವು ಸಂಪೂರ್ಣ ತುಂಬಿಹೋಗುತ್ತದೆ.
ನೀರಿನ ಹರಿವು ಸರಾಗವಾಗಿ ಆಗದ ಕಾರಣ ಸೈಟ್ ಗಳಲ್ಲಿ ಉಕ್ಕುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರಕ್ಕೆ 3 ಹಂತದ ಒಳಚರಂಡಿ ಯೋಜನೆಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ನಗರಸಭೆ ವತಿಯಿಂದ ಸ್ಥಳೀಯರಿಗೆ ತಾತ್ಕಾಲಿಕವಾಗಿ ಪರಿಹಾರ ನೀಡಲು ಸಹಕರಿಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ಬಡಾವಣೆ ನಿವಾಸಿ ಗಳಾದ ರವಿಕುಮಾರ್, ವಸಂತ್, ನಾಗೇಶ್, ಸೌಮ್ಯ, ರವಿ, ಮಂಜುಳಾ, ಪ್ರಿಯಾಂಕಾ, ಶ್ರೀನಿವಾಸ್, ಮುಂತಾದವರು ಇದ್ದರು.