ನೊಯ್ಡಾ: ರೈಡಿಂಗ್ ಮತ್ತು ಟ್ಯಾಕಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪುಣೇರಿ ಪಲ್ಟನ್ ತಂಡವು ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ನ ಪಂದ್ಯದಲ್ಲಿ 54-18ರಿಂದ ಸುಲಭ ಜಯ ದಾಖಲಿಸಿ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು.
ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ 23-10ರಿಂದ ಮುನ್ನಡೆಯಲ್ಲಿದ್ದ ಪುಣೇರಿ ತಂಡವು ಉತ್ತರಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿತು.ತಂಡವು ರೈಡಿಂಗ್ನಿಂದ 23 ಅಂಕ ಗಳಿಸಿದರೆ, ಟ್ಯಾಕಲ್ನಿಂದ 20 ಪಾಯಿಂಟ್ಸ್ ಸಂಪಾದಿಸಿತು. ಅಲ್ಲದೆ, ನಾಲ್ಕು ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿ ಗಮನ ಸೆಳೆಯಿತು.
ಮೋಹಿತ್ ರೈಡಿಂಗ್ನಿಂದ 9 ಮತ್ತು ಟ್ಯಾಕಲ್ನಿಂದ 4 ಪಾಯಿಂಟ್ಸ್ ಸಂಪಾಯಿಸಿ ‘ಸೂಪರ್ 10’ ಸಾಧನೆ ಮೆರೆದರು. ಅವರಿಗೆ ಅಸ್ಲಾಂ ಇನಾಮದಾರ್ (8) ಸಾಥ್ ನೀಡಿದರು. ಟ್ಯಾಕಲ್ನಲ್ಲಿ ಗೌರವ್ ಖಾತ್ರಿ (6), ಮೊಹಮ್ಮದ್ ರೇಜಾ ಶಾಡ್ಲೌಯಿ (5), ಅಭಿನೇಶ್ ನಡರಾಜನ್ (5) ಮಿಂಚಿದರು.
ಹಿಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಪವನ್ ಸೆಹ್ರಾವತ್, ಟೈಟನ್ಸ್ಗೆ ವಾಪಸಾದರೂ ಕೇವಲ ಎರಡು ಅಂಕ ಗಳಿಸಲಷ್ಟೇ ಶಕ್ತವಾದರು.
ಒಟ್ಟು 8 ಪಂದ್ಯಗಳನ್ನು ಆಡಿರುವ ಪಲ್ಟನ್ ತಂಡವು 7ರಲ್ಲಿ ಗೆದ್ದು, ಒಂದರಲ್ಲಿ ಸೋತು ಒಟ್ಟು 36 ಅಂಕಗಳನ್ನು ಸಂಪಾದಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಬಡ್ತಿ ಪಡೆಯಿತು.