ದೊಡ್ಡಬಳ್ಳಾಪುರ: ತಾಲ್ಲೂಕಿಗೆ ತಡವಾಗಿ ಕತ್ತಲೆಯಲ್ಲಿ ಆಗಮಿಸಿದ ಬಿಜೆಪಿ ಬರ ಅಧ್ಯಯನ ತಂಡ. ಬರದ ಕುರಿತು ಸರ್ಕಾರವನ್ನು ಟೀಕೆ ಮಾಡುತ್ತಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶುಕ್ರವಾರ ರಾತ್ರಿ ಸ್ವತಃ ತಾವೇ ಟೀಕೆಗೆ ಗುರಿಯಾದ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಡೆಯಿತು.
ಬಿಜೆಪಿ ನಾಯಕರು ಪದೇ ಪದೇ ರಾಜ್ಯಾದ್ಯಂತ ತಿರುಗಿ ಬರ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ, ಇನ್ನೊಂದೆಡೆ ಟೀಕೆಗೆ ಗುರಿಯಾಗುವಂತಹ ಕೆಲಸವನ್ನು ಬಿಜೆಪಿ ನಾಯಕರು ತಾವೇ ಮಾಡುತ್ತಿದ್ದಾರೆ.ಬರ ಅದ್ಯಯನಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳ ಹಿಂದೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ನಿಯೋಗ ಬಂದು ಬರದ ಕುರಿತು ಸಮೀಕ್ಷೆ ನಡೆಸಿ ಹೋಗಿದೆ, ಸಾಲದೆಂಬಂತೆ ರಾಜ್ಯ ಬಿಜೆಪಿ ನಾಯಕರು ಸಹ ಅನಗತ್ಯವಾಗಿ ಪ್ರಚಾರ ಪಡೆಯಲು ಬರ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಪ್ರವಾಸ ಮಾಡಿದ್ದರು. ಕೇಂದ್ರ ಸರ್ಕಾರ ಬರದ ಪರಿಹಾರವಾಗಿ ರಾಜ್ಯಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ.
ಶುಕ್ರವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ರೈತರ ಜಮೀನಿಗಳಿಗೆ ಭೇಟಿ ನೀಡಿ ಬರದಿಂದ ಉಂಟಾಗಿರುವ ನಷ್ಟ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಉಳುಮೆ ಭೂಮಿ ಬರದಿಂದ ಏನೆಲ್ಲಾ ನಷ್ಟವಾಗಿದೆ ಎಂದು ಸಮೀಕ್ಷೆ ನಡೆಸಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ಬಾರದೆ, ತಡವಾದ ಕಾರಣ ಕತ್ತಲಾಗಿದ್ದು, ರೈತರೊಬ್ಬರ ಹೊಲವನ್ನು ಮೊಬೈಲ್ ಟಾರ್ಚ್ ಬೆಳಕಲ್ಲಿ ಬರ ವೀಕ್ಷಣೆ ಮಾಡಿದರು.
ಈ ವೇಳೆ ವಿಪಕ್ಷ ನಾಯಕ ಅಶೋಕ್ ಅವರ ಜೊತೆಗೆ ಇದ್ದ ಬಿಜೆಪಿ ಕಾರ್ಯಕರ್ತರ ಗುಂಪು ಹೊಲಕ್ಕೆ ನುಗ್ಗಿದ್ದರಿಂದ ಅಳಿದುಳಿದ ಬೆಳೆಯು ನಾಶವಾಗಿದೆ ಎಂಬ ಪಿಸು ಮಾತುಗಳು ಅಲ್ಲಿದ್ದ ರೈತರಿಂದ ಕೇಳಿಬಂತು.ನಂತರ ಕೋಡಿಹಳ್ಳಿ ಗ್ರಾಮಕ್ಕೆ ತೆರಳಿದ ಆರ್.ಅಶೋಕ್ ಅವರು ಅಲ್ಲಿನ ಇಬ್ಬರು ರೈತರನ್ನು ಬೇಟಿ ಮಾಡಿ ಮಾತನಾಡಿದರು,
ವಿಪಕ್ಷ ನಾಯಕ ರೊಂದಿಗೆ ತಮ್ಮ ಅಳಲು ತೋಡಿಕೊಂಡ ರೈತ ಕುಟುಂಬ, ನಮಗೆ ಗೃಹಲಕ್ಷ್ಮೀಯೂ ಬಂದಿಲ್ಲ, ಹಾಲಿಗೆ ಎರಡು ರೂ ಕಡಿತ ಮಾಡಿದ್ದಾರೆ, ಪಡಿತರದಲ್ಲಿ ಮೂರು ಕೆಜಿ ಅಕ್ಕಿ ಎರಡು ಕೆಜಿ ರಾಗಿ ಕೊಡ್ತಾರೆ ನಮಗೆ ರಾಗಿ ಬೇಡ ಅಕ್ಕಿ ಕೊಡಲಿ ಎಂದರು. ಮತ್ತೊಬ್ಬ ವೃದ್ದೆ ಮಾತನಾಡಿ ನಮಗೆ ಸರಿಯಾಗಿ ಕರೆಂಟ್ ಕೊಟ್ಟರೆ ಸಾಕಪ್ಪ ಬೇರೆ ಏನೂ ಬೇಡ ಎಂದರು.
ಕೇಂದ್ರ ಸರ್ಕಾರದ ತಂಡ ಬರ ವೀಕ್ಷಣೆ ಮಾಡಿ ಹೋಗಿದ್ದು, ಪರಿಹಾರ ಬಿಡುಗಡೆ ಮಾಡದಿರುವ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್.ಅಶೋಕ್ ನಮ್ಮ ಅವದಿಯಲ್ಲಿ ರೈತರಿಗೆ ನಾವು ಬರಪರಿಹಾರ ನೀಡಲು ಕೇಂದ್ರ ಸರ್ಕಾರವನ್ನು ಕಾಯಲಿಲ್ಲ ನಾವೇ ಕೊಟ್ಟೆವು ಎಂದು ಹೇಳುವ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಹಣ ಕೊಡುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸುಧಾಕರ್, ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ಸೇರಿದಂತೆ ತಾಲ್ಲೂಕಿನ ಕಂದಾಯ, ಹಾಗೂ ಪೆÇಲೀಸ್ ಇಲಾಖೆ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.