ದೊಡ್ಡಬಳ್ಳಾಪುರ: ಕರ್ನಾಟಕದಲ್ಲಿ ಕೋಮುವಾದಿಗಳಿಂದ ಸೌಹಾರ್ದತೆಗೆ ಧಕ್ಕೆ ಬರುತ್ತಿದೆ. ಅನಾದಿ ಕಾಲದಿಂದಲೂ ದೇಶದಲ್ಲಿ ಹಿಂದೂ- ಮುಸ್ಲಿಂ ಹಾಗೂ ಇತರ ಸಮುದಾಯಗಳ ಮಧ್ಯೆ ಸೌಹಾರ್ದತೆ ಬೆಳೆದಿದೆ. ಆದರೆ, ಕೋಮುವಾದಿಗಳು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಅಧಿಕಾರ ಹಾಗೂ ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ ಕೋಮುವಿಭಜನೆ ಮಾಡುತ್ತಿದ್ದಾರೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಂದ್ರ ತೇಜಸ್ವಿ ಆರೋಪಿಸಿದರು.
ಸಂವಿಧಾನ ಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಮಹಾತ್ಮಗಾಂಧಿ ಹುತಾತ್ಮ ದಿನದ ಅಂಗವಾಗಿ ನಡೆದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗುತ್ತಿದೆ. ರೈತರು, ಕಾರ್ಮಿಕರ ಸಂಕಷ್ಟ ಮರೆಮಾಚಲು ಕೋಮವಾದ ಹರಡಲಾಗುತ್ತಿದೆ.
ಸಂದಿಗ್ಧ ಸನ್ನಿವೇಶದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಜನಹಿತ ಕಾಪಾಡಬೇಕು. ಸೌಹಾರ್ದತೆಯ ಸಂದೇಶ ಸಾರಬೇಕಿದೆ ಎಂದು ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಪ್ರಕಾಶ್ ಮಂಟೇದ ಮಾತನಾಡಿ, ಭಾರತೀಯರ ರಕ್ತ, ಪರಂಪರೆಯಲ್ಲಿ ಸೌಹಾರ್ದತೆ ಎಂಬುದು ಹಾಸುಹೊಕ್ಕಾ ಗಿದೆ. ಯಾರದ್ದೋ ಹಿತಾಸಕ್ತಿಗಾಗಿ ಬಹುತ್ವದ ಭಾರತವನ್ನು ಬಲಿ ಕೊಡುವುದು ಸರಿಯಲ್ಲ. ಗಾಂಧೀಜಿಯವರನ್ನು ದೈಹಿಕವಾಗಿ ಕೊಂದಿರಬಹುದು.
ಆದರೆ, ಅವರ ವಿಚಾರಧಾರೆಗಳನ್ನು ಕೊಲ್ಲಲಾಗದು. ಭಾರತೀಯತೆ ಎಂಬುದು ಯುಗದ ಸತ್ಯ. ಇಲ್ಲಿ ಎಲ್ಲ ಜಾತಿ, ಧರ್ಮಗಳು ಒಟ್ಟಾಗಿ ಬದುಕುತ್ತಿವೆ. ಇಂತಹ ದೇಶದಲ್ಲಿ ವಿಭಜನೆ ಎಂಬುದು ಅಸಾಧ್ಯ. ಯುವ ಸಮೂಹ ಮಹಾತ್ಮ ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಜಾತ್ಯಾತೀತವಾಗಿ ಬದುಕಬೇಕು. ಕೋಮುವಾದಿಗಳ ಒಳಸಂಚಿಗೆ ಒಳಗಾಗಿ ಬಹುತ್ವದ ಪರಂಪರೆಯನ್ನು ಯಾವುದೇ ಕಾರಣಕ್ಕೆ ಬಲಿ ಕೊಡಬಾರದು ಎಂದರು.
ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧಿ, ಅಂಬೇಡ್ಕರ್, ಬುದ್ಧ ಬಸವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಜಾಣೆಜಾಣೆಯರು ಜಗದೀಶ್ ಮಾತನಾಡಿ, ರಾಜಕಾರಣಿಗಳು ಗಾಂಧಿ ವಿಚಾರ ಗಳನ್ನು ಜನರಿಗೆ ತಲುಪಿಸುತ್ತಿಲ್ಲ. ಭಾರತದಲ್ಲಿ ಗಾಂಧೀಜಿ ಅವರನ್ನು ರಾಜಕಾರಣಿ ಗಾಂಧಿ, ಗುಡಿಗುಡಾರದ ಗಾಂಧಿ, ಜನಸಾಮಾನ್ಯರ ಗಾಂಧಿಯಂತೆ ಮಾಡಿಕೊಂಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರನ ನಿಜವಾದ ಚಿಂತನೆ, ವಿಚಾರಗಳನ್ನು ಮರೆಮಾಚಿ ನವಪೀಳಿಗೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ರಂಗಸ್ವಾಮಿ ಮಾತನಾಡಿದರು. ರಂಗಮನೆ ತಂಡದ ಹೇಮಂತ್ ಹಾಗೂ ಮನೋಜ್ ಅವರ ತಂತಡ ವಿದ್ಯಾರ್ಥಿಗಳು ಸೌಹಾರ್ದ ಗೀತೆಗಳನ್ನು ಹಾಡಿದರು. ಜಾಥಾಗೂ ಮುನ್ನ ಮಹಾತ್ಮ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಲಕ್ಷ್ಮಿಪತಿ, ಚುಂಚೇಗೌಡ, ಕೆ.ಆರ್.ರವಿಕಿರಣ್ ಚಿಕ್ಕಣ್ಣ, ಗುರುರಾಜಪ್ಪ, ಗೂಳ್ಯ ಹನುಮಣ್ಣ, ರಾಜು ಸಣ್ಣಕ್ಕಿ, ಸಂಜೀವನಾಯಕ್, ಗಂಗರಾಜು ಶಿರವಾರ, ರುದ್ರಾರಾಧ್ಯ, ಕೆ.ವೆಂಕಟೇಶ್, ಡಿ.ಪಿ.ಆಂಜನೇಯ, ನಳಿನಾಕ್ಷಿ, ನಟರಾಜ್, ಪಿ.ಎ.ವೆಂಕಟೇಶ್, ದೊಡ್ಡತುಮಕೂರು ವೆಂಕಟೇಶ್, ರೂಪಿಣಿ ಮಂಜುನಾಥ್ ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರಿ ಪ್ರಥಮ ದರ್ಜೆ ಹಾಗೂ ಜಾಲಪ್ಪ ಕಾಲೇಜು ವಿದ್ಯಾರ್ಥಿಗಳೂ ಸೇರಿ ನೂರಾರು ಜನರು ಭಾಗವಹಿಸಿದ್ದರು.