ಬೆಂಗಳೂರು: ದ.ರಾ.ಬೇಂದ್ರೆಯವರು ಬರೆದ ಪ್ರತಿಯೊಂದು ಕವನಗಳ ಸಾಲು ಅವರು ಜೀವನದಲ್ಲಿ ಕಂಡ ನೋವು, ಕಷ್ಟಗಳ ಕನ್ನಡಿಯಂತಿವೆ. ಬೇಂದ್ರೆಯವರು ವೈಯುಕ್ತಿಕ ಜೀವನವು ಕಷ್ಟ-ನಷ್ಟ-ದು:ಖ- ನೋವುಗಳಿಂದ ಕೂಡಿದ್ದರೂ, ಕರ್ನಾಟಕ ಸಹೃದಯಿಗಳಿಗೆ ಸಾಹಿತ್ಯ ರಸದೌತಣವನ್ನೇ ನೀಡಿದರು. ಬೇಂದ್ರೆಯವರ ಕಾವ್ಯಪ್ರತಿಭೆಗೆ ಅವರೇ ಸಾಟಿ. ಕನ್ನಡ ನಾಡು ಕಂಡ ಅತ್ಯದ್ಭುತ ಕವಿ ಎಂದು ಯೂತ್ ಫಾರ್ ಬ್ಯಾಂಕ್ ಜಾಬ್ಸ್ ನ ಸಂಸ್ಥಾಪಕ ಅಧ್ಯಕ್ಷ ಶ್ರೀ ಎಂ ವೆಂಕಟೇಶ ಶೇಷಾದ್ರಿಯವರು ಅಭಿಪ್ರಾಯ ಪಟ್ಟರು.
ಶ್ರೀ ವೆಂಕಟೇಶ ಶೇಷಾದ್ರಿಯವರು ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯವರು ಆಯೋಜಿಸಿದ್ದ ದ.ರಾ.ಬೇಂದ್ರೆ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ದರಾ ಬೇಂದ್ರೆಯವರ ಮಾತೃಭಾಷೆ ಮರಾಠಿಯಾದರೂ ಕನ್ನಡದಲ್ಲಿ ಅತ್ಯದ್ಭುತ ಸಾಹಿತ್ಯವನ್ನು ರಚಿಸಿ, ಕನ್ನಡ ನಾಡಿಗೆ ಎರಡನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದ ರಾ ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಅಧ್ಯಯನ ಸಹಕಾರಿಯಾಗಲಿದೆ ಎಂದರು.
ಕೆನರಾ ಬ್ಯಾಂಕ್ ನ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ನಿರ್ದೇಶಕ ಶ್ರೀ ಆರ್ ರಾಘವೇಂದ್ರನ್ ರವರು ಮಾತನಾಡಿ ಕಳೆದ 25 ವರುಷಗಳಿಂದ ಸಂಸ್ಥೆಯು ಸುಮಾರು 7000 ಕ್ಕೂ ಹೆಚ್ಚು ಬಡಪ್ರತಿಭಾವಂತ ಯುವಕ-ಯುವತಿಯರಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡಿದ್ದು, ಇವರಲ್ಲಿ ಶೇಖಡ 9ಔ ಕ್ಕೂಹೆಚ್ಚು ಯುವಕ-ಯುವತಿಯರು ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ಸಂಸ್ಥೆಯ ವಿದ್ಯಾರ್ಥಿಯಾದ ಖಾದರ್ ಸಾಬ್ ರವರು ಬೇಂದ್ರೆಯವರ ಬಗ್ಗೆ ಮಾತನಾಡಿದ್ದಲ್ಲದೆ, ಅವರ ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಎನ್ ಅನುಶ್ರೀ ಮತ್ತು ಎಂ ವೆಂಕಟೇಶ ಬಾಬು ರವರು ಉಪಸ್ಥಿತರಿದ್ದರು.