This is the title of the web page
This is the title of the web page

ಜನಮನ ಗೆದ್ದ ರಾಘವೇಂದ್ರ ಸ್ಟೋರ್ಸ್

ಒಂದು ಕಡೆ ಚುನಾವಣೆ. ಮತ್ತೊಂದು ಕಡೆ ಐಪಿಎಲ್ . ಇದರ ನಡುವೆ ಕಳೆದವಾರ ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತೋಷವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.
ಚುನಾವಣೆ, ಐಪಿಎಲ್ ನಡುವೆ ಈ ಚಿತ್ರ ಬಿಡುಗಡೆ ಮಾಡುತ್ತಾರಾ? ಎಂದು ಎಷ್ಟೋ ಜನ ಕೇಳುತ್ತಿದ್ದರು. ಆದರೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಕಂಟೆಂಟ್ ಚೆನ್ನಾಗಿದ್ದರೆ ಜನ ಖಂಡಿತವಾಗಿ ನೋಡುತ್ತಾರೆ ಎಂಬ ನಂಬಿಕೆಯಿಂದ ಈ ಚಿತ್ರವನ್ನು ಬಿಡುಗಡೆ ಮಾಡಿದರು.

ಅವರ ಮಾತು ನಿಜವಾಯಿತು. ಜನ ನಮ್ಮ ಚಿತ್ರಕ್ಕೆ ತೋರುತ್ತಿರುವ ಮೆಚ್ಚುಗೆಗೆ ಮನತುಂಬಿ ಬಂದಿದೆ ಹಾಗೂ ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ರಾಯರ ಹೆಸರಿನ ಈ ಚಿತ್ರಕ್ಕೆ ರಾಯರೆ ಯಶಸ್ಸು ನೀಡುತ್ತಿದ್ದಾರೆ ಎಂದರು ನಾಯಕ ಜಗ್ಗೇಶ್.
ನಾವು ಈ ಸಿನಿಮಾ ಬಿಡುಗಡೆಗೂ ಹತ್ತು ದಿನಗಳ ಮುಂಚೆ ಪ್ರಮೋಷನ್ ಶುರು ಮಾಡಿದ್ದು. ಆನಂತರ ಬಿಡುಗಡೆಯಾದ ಟ್ರೇಲರ್ ಹಾಗೂ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಬಂತು. ನನ್ನ ಈ ಹಿಂದಿನ ಸಿನಿಮಾಗಳ ಜಾನರ್ ಬೇರೆ.

ಈ ಸಿನಿಮಾ ಜಾನರ್ ಬೇರೆ. ಲೇಟ್ ಮ್ಯಾರೇಜ್ ಹಾಗೂ ಆನಂತರ ಅವರಿಗೆ ಮಕ್ಕಳಾಗದ ಸಮಸ್ಯೆ ಬಗ್ಗೆಗಿನ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಯಶಸ್ಸಿಗೆ ಕಾರಣರಾದ ನನ್ನ ತಂಡಕ್ಕೆ, ನಿರ್ಮಾಣ ಮಾಡಿರುವ ಖ್ಯಾತ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರಿಗೆ ಹಾಗೂ ಜಗ್ಗೇಶ್ ಅವರ ಆದಿಯಾಗಿ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.

ಚಿತ್ರದಲ್ಲಿ ಅಭಿನಯಿಸಿರುವ ಶ್ವೇತ ಶ್ರೀವಾಸ್ತವ್, ದತ್ತಣ್ಣ, ಮಿತ್ರ, ರವಿಶಂಕರ್ ಗೌಡ, ಚಿತ್ಕಲಾ ಬಿರಾದಾರ್, ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಜಿ ರಾಜ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಹಕ ಶ್ರೀಶ ಕುದುವಳ್ಳಿ ಮುಂತಾದವರು ಈ ಸಂದರ್ಭದಲ್ಲಿ ಚಿತ್ರದ ಕುರಿತು ಮಾತನಾಡಿದರು.