ಕೋಲಾರ: ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀರಾ ಎಂದು ಕೇಳಿದ್ದರು ಅಲ್ಲಿನ ನಾಯಕರು. ಮೊದಲ ಕ್ಯಾಬಿನೆಟ್‍ನಲ್ಲಿ ಪ್ರಣಾಳಿಕೆಯ ಭರವಸೆಗಳನ್ನು ಈಡೇಸಬೇಕು ಎಂದು ಹೇಳಿದ್ದೆ. ಅದೇ ರೀತಿ ರಾಜ್ಯದಲ್ಲೂ ಪ್ರಣಾಳಿಕೆಯ ಭರವಸೆ ಗಳನ್ನು ಈಡೇರಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದರು.
ಕೋಲಾರದಲ್ಲಿ ಕೆಪಿಸಿಸಿಯಿಂದ ಏರ್ಪಡಿಸಲಾಗಿದ್ದ ಜೈ ಭಾರತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ರಾಹುಲ್‍ಗಾಂಧಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಪ್ರಣಾಳಿಕೆಯಲ್ಲಿ ನೀಡಲಾದ ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಮೊದಲನೇ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡು ಜಾರಿಗೊಳಿಸಲಾಗುವುದು.
ಅದಕ್ಕಾಗಿ ಆರು ತಿಂಗಳು ಅಥವಾ ಒಂದು ವರ್ಷ ಕಾಯುವ ಅಗತ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕನಿಷ್ಠ 150 ಸ್ಥಾನಗಳಲ್ಲಿ ಗೆಲ್ಲಬೇಕು. ಆ ಬಗ್ಗೆ ನನಗೆ ಭರವಸೆ ಇದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದರು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಸರ್ಕಾರ ರೈತರು, ಬಡವರು, ಕಾರ್ಮಿಕರ ಬಗ್ಗೆ ಕಾಳಜಿ ಹೊಂದಿದೆ. ಆ ವರ್ಗಗಳ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಲಾಗುವುದು.
ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದೆ. ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಪ್ರಧಾನಿ ಆದಾನಿಗೆ ಹಣ ಕೊಡ್ತಾರೆ, ನಾವು ಬಡವರಿಗೆ ಹಣ ಕೊಡ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡ್ತೇವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಏನು ಕೆಲಸ ಮಾಡಿದೆ. 40% ಕಮಿಷನ್ ಕೆಲಸ ಬಿಜೆಪಿ ಮಾಡಿದೆ. ಬಿಜೆಪಿ ಸರ್ಕಾರ ಹಣ ಲೂಟಿ ಮಾಡಿದೆ.
ಯಾವುದೇ ಕೆಲಸ ಮಾಡಿದ್ರು 40% ಕಮಿಷನ್ ಪಡೆದಿದ್ದಾರೆ. ಇದು ನಾನು ಹೇಳಿದ್ದಲ್ಲ, ಗುತ್ತಿಗೆದಾರ ಸಂಘದ ಅಧ್ಯಕ್ಷ ಪಿಎಂಗೆ ಪತ್ರ ಬರೆದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಇಲ್ಲಿಯವರೆಗೆ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಪಿಎಂ ಮೌನದ ಅರ್ಥ, ತಾವು ಸಹ 40% ಕಮಿಷನ್‍ನಲ್ಲಿ ಭಾಗಿಯಾಗಿದ್ದಾರೆ ಎಂದು. ಹಗರಣಗಳ ಸರಮಾಲೆಗಳಿವೆ.
ಖಾಸಗಿ ಸ್ಕೂಲ್ ಸಂಘಟನೆ, ಉಪನ್ಯಾಸಕರ ನೇಮಕಾತಿ ಹಗರಣ ಆಗಿದೆ. ದೇಶದಲ್ಲಿ ದಲಿತ ಆದಿವಾಸಿ ಮತ್ತು ಒಬಿಸಿ ಜನಸಂಖ್ಯೆಗೆ ಅನುಗುಣವಾಗಿ ಸಂಸತ್ ವಿಧಾನಸಭೆ ಮತ್ತು ಸರ್ಕಾರ ಇಲಾಖೆಗಳಲ್ಲಿ ಪ್ರಾತಿನಿದ್ಯ ದೊರೆತಿಲ್ಲ. 2011 ರಲ್ಲಿ ಜನಸಂಖ್ಯೆ ಗಣತಿ ಮಾಡಿದ್ದೇವೆ. ಯುಪಿಎ ಸರ್ಕಾರದ ಜನಗಣತಿ ಮಾಡಿದೆ. ಮೋದಿ ಅವರೇ ಆ ಜನಗಣತಿ ಬಿಡುಗಡೆ ಮಾಡಿಬಿಡಿ. ನೀವು ಬಿಡುಗಡೆ ಮಾಡಲಿಲ್ಲ ಅಂದ್ರೆ ಒಬಿಸಿಗೆ ಮೋಸ ಮಾಡಿದಂತೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಸಂಪತ್ತನ್ನು ಲೂಟಿ ಮಾಡಿದ ಅದಾನಿ ಕಂಪನಿಗಳ ಬಗ್ಗೆ ನಾನು ಮಾತನಾಡಿದರೆ ನನ್ನ ವಿರುದ್ಧ ಸೇಡಿನ ರಾಜಕೀಯ ಮಾಡಲಾಗುತ್ತಿದೆ. ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಸ್ಪೀಕರ್ ಬಳಿ ಹೋಗಿ ದೂರು ನೀಡಿದರೆ. ಮೊದಲು ನೀವು ಚಹ ಕುಡಿಯಿರಿ ಆ ನಂತರ ಮಾತನಾಡುತ್ತೇನೆ ಎಂದ ಅವರು ಏನೂ ಮಾಡಲಿಲ್ಲ ಎಂದರು.
Leave a Review