ಬೆಂಗಳೂರು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ನಾಯಕಿ ಪ್ರಿಯಾಂಕಾ ಗಾಂಧಿ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾತ್ರಿ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ರಾಹುಲ್, ಪ್ರಿಯಾಂಕಾರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬರಮಾಡಿಕೊಳ್ಳಲಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಖಾಸಗಿ ಹೋಟೆಲ್ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಉಭಯ ನಾಯಕರು ನಾಳೆ ಬೆಳಗ್ಗೆ ಕೇರಳದ ವಯನಾಡ್ಗೆ ತೆರಳಲಿದ್ದಾರೆ.ಬೆಂಗಳೂರಿನಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಾಹಿತಿ ಇಲ್ಲ. ಮತದಾರರಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ವಯನಾಡ್ಗೆ ತೆರಳಲಿರುವ ಅವರು ಮಾರ್ಗ ಮಧ್ಯೆ ಬೆಂಗಳೂರು ವಿಮಾನ ನಿಲ್ದಾಣ ಬಳಿ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ರಾಹುಲ್ ಹಾಗೂ ಪ್ರಿಯಾಂಕಾ ಕೇರಳದಮಲಪ್ಪುರಂ ಜಿಲ್ಲೆ ಹಾಗೂ ಕಲ್ಪಟ್ಟಾದಲ್ಲಿ ಬುಧವಾರ ಮತದಾರರನ್ನು ಭೇಟಿ ಮಾಡಲಿದ್ದಾರೆ. ರಾಹುಲ್ ಗಾಂಧಿ ವಯನಾಡ್ ತೊರೆದು ರಾಯ್ಬರೇಲಿ ಉಳಿಸಿಕೊಂಡರೆ ಅವರ ಸ್ಥಾನಕ್ಕೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ರಾಯಬರೇಲಿಯನ್ನು ಉಳಿಸಿಕೊಂಡು ಹಾಲಿ ಕ್ಷೇತ್ರವಾದ ವಯನಾಡನ್ನು ಹೊರಗಿಡುವ ಬಗ್ಗೆ ರಾಹುಲ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.ಉತ್ತರ ಪ್ರದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ವಾತಾವರಣವನ್ನು ಗಮನಿಸಿ, ಅಲ್ಲಿ ರಾಹುಲ್ ಉಪಸ್ಥಿತಿಯು ಅವಕಾಶವನ್ನು ಬಳಸಿಕೊಳ್ಳಲು ಪಕ್ಷ ಬಯಸುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.