ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಭಾರತ ತಂಡ ಶನಿವಾರ ಕೆನಡಾ ತಂಡವನ್ನು ಎದುರಿಸಲಿದ್ದು, ಗುಂಪಿನ ಎಲ್ಲಾ ಪಂದ್ಯವನ್ನು ಗೆದ್ದು ಕ್ಲೀನ್ ಸ್ವೀಪ್ ನೊಂದಿಗೆ ಸೂಪರ್-8 ಪ್ರವೇಶಿಸುವ ಗುರಿ ಹೊಂದಿದೆ. ಭಾರತ ತಂಡ ಲೀಗ್ ಹಂತದ ಕೊನೆಯ ಪಂದ್ಯವನ್ನು ಫ್ಲೋರಿಡಾದಲ್ಲಿ ಆಡಲಿದೆ.
ಈಗಾಗಲೇ ಸೂಪರ್-8 ಪ್ರವೇಶಿಸಿರುವ ಭಾರತ ತಂಡ ಬೆಂಚ್ ಕಾಯಿಸುತ್ತಿರುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಪ್ರಯೋಗ ನಡೆಸಲು ಉದ್ದೇಶಿಸಿದೆ.
ಅಮೆರಿಕದ ಮೈದಾನದಲ್ಲಿ ಅಪಾಯಕಾರಿ ಆಗಿರುವ ಕಾರಣ ಆಟಗಾರರು ಗಾಯಗೊಂಡರೆ ಎಂಬ ಭಯ ತಂಡವನ್ನು ಕಾಡುತ್ತಿದೆ. ಅಲ್ಲದೇ ಮಳೆ ಭೀತಿಯೂ ಇರುವುದರಿಂದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಸೂಪರ್-8 ಸಿದ್ಧಗೊಳ್ಳಲು ಅವಕಾಶ ನೀಡಬಹುದು ಎಂಬ ಚಿಂತನೆ ತಂಡದಲ್ಲಿ ನಡೆಯುತ್ತಿದೆ.
ರವೀಂದ್ರ ಜಡೇಜಾ ಬದಲಿಗೆ ಕುಲದೀಪ್ ಯಾದವ್ ಮತ್ತು ಜಸ್ ಪ್ರೀತ್ ಬುಮ್ರಾ ಬದಲಿಗೆ ಯಜುರ್ವೆಂದ್ರ ಚಾಹಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಅಲ್ಲದೆ ಕೆನಡಾ ಬಲಿಷ್ಠ ತಂಡವಲ್ಲದ ಕಾರಣ ಸ್ಪಿನ್ನರ್ ಗಳಿಗೆ ಮಣೆ ಹಾಕಲು ನಿರ್ಧರಿಸಿದೆ ಎಂದು ತಂಡದ ಮೂಲಗಳು ತಿಳಿಸಿವೆ. ಫ್ಲೋರಿಡಾದಲ್ಲಿ ಶೇ.55ರಷ್ಟು ಮಳೆಯಾಗುವ ಸಾದ್ಯತೆ ಇದೆ. ಮಳೆಯಾಗಿ ಅರ್ಧಬಂರ್ಧ ಪಂದ್ಯ ನಡೆದರೂ ಫೀಲ್ಡಿಂಗ್ ವೇಳೆ ಆಟಗಾರರು ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.