ಮಾಗಡಿ: ತಾಲ್ಲೂಕಿನ 83 ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಯೋಜನೆಗೆ ತುಮಕೂರು ಜಿಲ್ಲೆಯ ಭಾಗದ ಜನಪ್ರತಿನಿಧಿಗಳು ರೈತರು ವಿರೋಧಿಸುತ್ತಿದ್ದು ಹೇಮೆ ಯೋಜನೆ ನಮ್ಮ ನೀರು ನಮ್ಮ ಹಕ್ಕಾಗಿದ್ದು ಹೇಮಾವತಿ ನೀರು ಮಾಗಡಿಗೆ ಬರಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ನವನಿರ್ಮಾಣ ವೇದಿಕೆ ವತಿಯಿಂದ ದಿ.22:05:2024 ರ ಬುಧವಾರದಂದು ಮರೂರು ಹ್ಯಾಂಡ್ ಪೋಸ್ಟ್ ಬಳಿಯಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ರಾಜ್ಯಾದ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ ಹೇಳಿದರು.
ಪಟ್ಟಣದಲ್ಲಿ ಈ ಕುರಿತು ಮಾತನಾಡಿದ ಅವರು ಮಾಗಡಿಯ ಶ್ರೀ ರಂಗ ಏತ ನೀರಾವರಿ ಹೇಮಾವತಿ ಯೋಜನೆಗೆ ಸರಕಾರದಿಂದ 2014 ರಲ್ಲಿ ಮುಕ್ಕಾಲು ಟಿಎಂಸಿ ನೀರು ಮಂಜೂರಾಗಿದ್ದು ಈಗಾಗಲೇ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಡಿಯಲ್ಲಿ ಕಾಮಗಾರಿ ಆರಂಭವಾಗಿ 80 ರಷ್ಟು ಕಾಮಗಾರಿ ಮುಗಿದಿದ್ದು.
ಇನ್ನು ಶೇ % 20 ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು ಇದು ಮುಗಿದರೆ ಮಾಗಡಿಯ 83 ಕೆರೆಗಳಿಗೆ ನೀರು ತುಂಬಿಸಬಹುದು. ಆದರೆ ಇದನ್ನು ಸಹಿಸದ ತುಮಕೂರು ಭಾಗದ ಹಾಲಿ ಮಾಜಿ ಜನಪ್ರತಿನಿಧಿಗಳು ರೈತರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ರಾಜಣ್ಣ ಹೇಳಿದರು.
ತುಮಕೂರು ಭಾಗದ ಜನಪ್ರತಿನಿಧಿಗಳು ನಾಲೆ ಮೂಲಕ ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋದರೆ ನಮ್ಮ ವಿರೋಧವಿಲ್ಲ. ಆದರೆ ಎಕ್ಸ್ಪ್ರೆಸ್ ಕೆನಾಲ್ ಮೂಲಕ ತೆಗೆದುಕೊಂಡು ಹೋದರೆ ನಮಗೆ ತೊಂದರೆಯಾಗುತ್ತದೆ ಎಂಬ ದ್ವಂದ್ವ ಹೇಳಿಕೆ ನೀಡುತ್ತಾ ಜನರ ರೈತರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಪೈಪ್ ಲೈನ್ ಮುಖಾಂತರ ತೆಗೆದುಕೊಂಡು ಬಂದರೆ ನೀರು ಪೋಲಾಗುವುದನ್ನು ತಡೆಯಬಹುದು ಎಂಬ ಸಾಮಾನ್ಯ ಜ್ಞಾನ ಅಲ್ಲಿನ ಜನಪ್ರತಿನಿಧಿಗಳಿಲ್ಲ.
ಮಾಗಡಿಗೆ ಮುಕ್ಕಾಲು ಟಿಎಂಸಿ ನೀರು ಹರಿಸಬಹುದು ಎಂದು ನೀರಾವರಿ ತಜ್ಞರು ಸರಕಾರಕ್ಕೆ ವರದಿ ಸಲ್ಲಿಸಿದ್ದು ಇದರ ಸ್ಪಷ್ಟವಾದ ಮಾಹಿತಿ ಪಡೆಯದ ಅವರು ಸುಖಾಸುಮ್ಮನೆ ನೀರಿನ ವಿಚಾರದಲ್ಲಿ ಹೋರಾಟ ಪ್ರತಿಭಟನೆ ಮಾಡುವುದು ತರವಲ್ಲ. ಇದನ್ನು ಖಂಡಿಸಿ ಮರೂರು ಹ್ಯಾಂಡ್ ಪೋಸ್ಟ್ ಬಳಿಯಲ್ಲಿ ಹೋರಾಟ ಹಮ್ಮಿಕೊಂಡಿರುವುದಾಗಿ ರಾಜಣ್ಣ ಸ್ಪಷ್ಟಪಡಿಸಿದರು.