ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ಕಿರಿಕ್ ಪಾರ್ಟಿ ತೆರೆಕಂಡು ಬರೋಬ್ಬರಿ ಏಳು ವರ್ಷಗಳಾಗಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ಅವರೆಲ್ಲರೂ ಮತ್ತಷ್ಟು ಖ್ಯಾತರಾಗಿದ್ದಾರೆ. ಉನ್ನತ ಮಟ್ಟದಲ್ಲಿದ್ದಾರೆ… ಆದರೆ, ಆ ರೀತಿಯ ಯೂತ್ ಕಾಮಿಡಿ ಸ್ಟೋರಿ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ ಬ್ಯಾಚುಲರ್ ಪಾರ್ಟಿ ಕೊಡಲು ಸಜ್ಜಾಗಿದ್ದಾರೆ ಎಂಬುದು ವಿಶೇಷ.
ಹೌದು. ಕಿರಿಕ್ ಪಾರ್ಟಿಯ ಬರಹಗಾರ ಅಭಿಜಿತ್ ಮಹೇಶ್, ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಬ್ಯಾಚುಲರ್ ಪಾರ್ಟಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿಯಿಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿ, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ಬ್ಯಾಚುಲರ್ ಪಾರ್ಟಿಯ ಮೊದಲ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಪೋಸ್ಟರ್ನಲ್ಲಿದ್ದಾರೆ. ಅದರ ಹಿನ್ನೆಲೆಯಲ್ಲಿ ಬ್ಯಾಂಕಾಕ್ನ ಕೆಲವು ಸ್ಥಳಗಳನ್ನೂ ಕಾಣಬಹುದು. ವೀಲ್ಚೇರ್ನಲ್ಲಿ ಅಚ್ಯುತ್ ಕುಳಿತುಕೊಂಡಿದ್ದರೆ, ಅವರ ಹಿಂದೆ ಯೋಗಿ, ದಿಗಂತ್ ಓಡಿ ಬರುತ್ತಿರುವ ದೃಶ್ಯ ಸದ್ಯ ಗಮನ ಸೆಳೆಯುತ್ತಿದೆ. ಪೋಸ್ಟರ್ನಲ್ಲಿ ಇನ್ನೂ ಗಮನಾರ್ಹ ಅಂಶಗಳಿದ್ದು, ಅವೆಲ್ಲವೂ ಸಿನಿಮಾದ ಕಥೆಗೆ ಪೂರಕವಾಗಿದೆಯಾ ಎಂಬುದಕ್ಕೆ ಚಿತ್ರತಂಡ ಉತ್ತರಿಸಬೇಕಿದೆ. ವಿಶೇಷವೆಂದರೆ ಈಪೋಸ್ಟರ್ನ್ನು ಹ್ಯಾಂಡ್ ಸ್ಕೆಚ್ ಮೂಲಕ ಡಿಸೈನ್ ಮಾಡಲಾಗಿದೆ.
ಬರೀ ಪೋಸ್ಟರ್ ಹರಿಬಿಡದೇ ಅದಕ್ಕೊಂದು ಸಣ್ಣ ವೀಡಿಯೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲೂ ಕೆಲವು ಅಂಶಗಳು ಗಮನ ಸೆಳೆಯುವಂತಿದ್ದು, ಹಿನ್ನೆಲೆ ಸಂಗೀತವೂ ಅಡಕವಾಗಿದೆ. ಇವೆಲ್ಲವೂ ರೀಲ್ಸ್ನಲ್ಲಿ ರಿಲೀಸ್ ಮಾಡಿರುವುದು ಮತ್ತೊಂದು ವಿಶೇಷ. ಕಣ್ಮನ ಸೆಳೆಯುವ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಥಿಯೇಟರ್ನಲ್ಲಿ ಇದರ ಅನುಭವ ಪಡೆಯಬೇಕು ಮತ್ತು ಚಿತ್ರಮಂದಿರಗಳಲ್ಲಿ ಕುಳಿತು ನಗೆಗಡಲಲ್ಲಿ ತೇಲುವ ಸಿನಿಮಾ ಇದಾಗಿದೆ ಎಂಬುದು ಚಿತ್ರತಂಡದ ಅನಿಸಿಕೆ.ಪರಂವಃ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.