ಬೆಂಗಳೂರು: ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರಿದಿದ್ದು, ಪೊಲೀಸರು ಶಂಕಿತ ಆರೋಪಿಯ ಪತ್ತೆಗಾಗಿ ಮುಂದಾಗಿದ್ದಾರೆ.
ಈಗಾಗಲೇ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಸಿಸಿಟಿಟಿಯಲ್ಲಿ ಅನುಮಾನಾಸ್ಪದ ಓಡಾಟದೊಂದಿಗೆ ಕಂಡುಬಂದಿದ್ದ, ಕ್ಯಾಪ್ ಧರಿಸಿದ ವ್ಯಕ್ತಿಯನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ನಿನ್ನೆ ಮಧ್ಯಾಹ್ನ ಸ್ಫೋಟದ ಕ್ಷಣದಿಂದಲೇ ಮಿಂಚಿನ ಕಾರ್ಯಾಚರಣೆಗೆ ಇಳಿದಿರುವ ಸಿಸಿಬಿ ಪೊಲೀಸರು, ಕ್ಯಾಪ್ ಹಾಕಿರುವ ವ್ಯಕ್ತಿ ಸೇರಿ ಒಟ್ಟು ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ.
ಅಜ್ಞಾತ ಸ್ಥಳದಲ್ಲಿ ಇವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.ಶಂಕಿತ ವ್ಯಕ್ತಿ ಖತರ್ನಾಕ್ ಪ್ಲಾನ್ ಮಾಡಿದ್ದು, ಘಟನೆಯುದ್ದಕ್ಕೂ ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡಿದ್ದ ಎಂದು ಗೊತ್ತಾಗಿದೆ. ಫಿಂಗರ್ ಪ್ರಿಂಟ್ ಎಲ್ಲಿಯೂ ಉಳಿಯಬಾರದು ಎಂಬ ಕಾರಣಕ್ಕೆ ಹ್ಯಾಂಡ್ ಗ್ಲೌಸ್ ಬಳಸಿದ್ದ. ಹ್ಯಾಂಡ್ ಗ್ಲೌಸ್ ಹಾಕಿಕೊಂಡೇ ಕೆಫೆಯೊಳಗೆ ಎಂಟ್ರಿ ನೀಡಿದ್ದು, ಅದರ ಜೊತೆಗೇ ಹೋಗಿದ್ದಾನೆ.
ಕೆಫೆಯಲ್ಲಿ ಬಾಂಬ್ ಇಟ್ಟು ನಾಪತ್ತೆಯಾದ ವ್ಯಕ್ತಿಯ ಚಲನವಲನಗಳ ಎಕ್ಸ್ಕ್ಲೂಸಿವ್ ದೃಶ್ಯಗಳು ಸಿಸಿಟಿವಿ ಫೂಟೇಜ್ನಿಂದ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಕೆಫೆಯಿಂದ ಹೊರ ಬಂದು ವೇಗವಾಗಿ ಹೋಗುತ್ತಿರುವ ವ್ಯಕ್ತಿಯ ಓಡಾಟವನ್ನು ಸಿಸಿಟಿವಿ ಸೆರೆಹಿಡಿದಿತ್ತು. ಆರೋಪಿ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಹಾಕಿಕೊಂಡಿದ್ದು, ತಲೆಗೆ ಕ್ಯಾಪ್ ಧರಿಸಿದ್ದಾನೆ. ಈತನ ಅನುಮಾನಾಸ್ಪದ ಓಡಾಟದ ದಾಖಲಾಗಿದೆ. ನಿನ್ನೆ 11:50ಕ್ಕೆ ಕೆಫೆಯಿಂದ ಹೊರ ಬಂದಿರುವ ಈತ ವೇಗವಾಗಿ ಹೊರಟುಹೋಗಿದ್ದಾನೆ.
ರಾಮೇಶ್ವರಂ ಕೆಫೆ ಮುಂದೆಯೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಅಲ್ಲೇ ಇರುವ ಹೋಟೆಲ್ನ ಹೊರ ಭಾಗದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಶಂಕಿತ ವಿಡಿಯೋದಲ್ಲಿ ಸೆರೆಯಾಗಿದ್ದಾನೆ. ಬರುವಾಗ ಈತ ಬಸ್ಸಿನಲ್ಲಿ ಬಂದು ಇಳಿದಿದ್ದ. ಹೋಗುವಾಗ ಅವಸರದಲ್ಲಿ ನಡೆದುಕೊಂಡು ಹೋಗಿದ್ದಾನೆ.
ಹೋಟೆಲ್ಗೆ ಬಂದವನು ತಿಂಡಿ ಟೋಕನ್ ಪಡೆದು ರವೆ ಇಡ್ಲಿ ತಿಂದು ವಾಷ್ ಬೇಸನ್ ಬಳಿ ಬ್ಯಾಗಿಟ್ಟು ಅಲ್ಲಿಂದ ಹೊರ ಹೋಗಿದ್ದಾನೆ. ಆರೋಪಿ ಸೈಡ್ ಬ್ಯಾಗ್ ಹಾಕಿಕೊಂಡು ಬ್ಯಾಗ್ ಒಳಗೆ ಮತ್ತೊಂದು ಬ್ಯಾಗ್ನಲ್ಲಿ ಸ್ಫೋಟಕ ತಂದಿರುವುದು ಇನ್ನೊಂದು ಸಿಸಿಟಿವಿ ಫೂಟೇಜ್ನಲ್ಲಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗುತ್ತಿದ್ದು, ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕೆ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್ನಲ್ಲಿ ಬ್ಯಾಗ್ ಬಿಸಾಡಿ ಎಸ್ಕೇಪ್ ಆಗಿದ್ದಾನೆ.