ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಪ್ರತಿಕ್ರಿಯಿಸಿದ್ದು, ಕೃತ್ಯವನ್ನು ಖಂಡಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು. ಅಭಿಮಾನಿಗಳನ್ನು ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? ಇಂತಹದ್ದನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ನಾವು ಕೊಡುವ ಸಂದೇಶ ಏನು? ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆ ಎಂದು ನಂಬಿದ್ದೇನೆ ಎಂದು ದರ್ಶನ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು.
ನಮಗೆ ಬ್ಲಾಕ್ ಎನ್ನುವ ಆಯ್ಕೆ ಇದೆ. ಎಲ್ಲರಿಗೂ ಈ ಆಯ್ಕೆ ಇದೆ. ಯಾರಾದರೂ ಟ್ರೋಲ್ ಮಾಡುತ್ತಿದ್ದರೆ ಮೊದಲು ಬ್ಲಾಕ್ ಮಾಡಿ. ನಾನು ಈ ಹಿಂದೆ ನನ್ನ ಟ್ರೋಲ್ ಮಾಡಿದ ಕೆಲವರ ವಿರುದ್ಧ ದೂರು ನೀಡಿದ್ದೆ. ಪೊಲೀಸರು ಕರೆದು ಎಚ್ಚರಿಕೆ ನೀಡಿದ ಬಳಿಕ ನಾನು ಕೇಸ್ ವಾಪಸ್ ಪಡೆದಿದ್ದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ದರ್ಶನ್ ರಾಜಕೀಯ ಪ್ರಭಾವ ಬೀರಿರಬಹುದು. ಆದರೆ ಈ ಹಂತದಲ್ಲಿ ರಾಜಕೀಯ ಪ್ರಭಾವ ಬೀರಲು ಸಾಧ್ಯವಿಲ್ಲ. ಕಳೆದ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳ ಪರ ಪ್ರಚಾರವೂ ಮಾಡಿದ್ದಾರೆ. ಹಾಗಂತ ಕಾನೂನಿಗಿಂತ ಯಾರು ದೊಡ್ಡವರಲ್ಲ. ಪೊಲೀಸ್ ಠಾಣೆಯ ಹೊರಗೆ ಕೆಲವು ಜನರು ಇದ್ದ ತಕ್ಷಣ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದರು.
ಈ ಬೆಳವಣಿಗೆ ನಟೋರಿಯಸ್ ಆಗಿದೆ. ರೌಡಿ ಎಲಿಮೆಂಟ್ ಇರುವ ಹಿನ್ನೆಲೆ ಜನರ ಗಮನ ಸೆಳೆದಿದೆ. ಆದರೆ ದರ್ಶನ್ಗಿಂತ ಅಧಿಕ ಅಭಿಮಾನಿಗಳಿರುವ ನಟರಿದ್ದಾರೆ. ನಾನು ವೀಡಿಯೋ ನೋಡಿದೆ. ರಾಡ್ನಿಂದ ತಲೆಗೆ ಹೊಡೆದಿದ್ದಾರೆ. ಇನ್ನು ಹಲವು ವಿಡಿಯೋಗಳು ಬರುತ್ತಿದೆ. ಇದನ್ನೇಲ್ಲ ಮಾಡಲು ಹೇಗೆ ಸಾಧ್ಯ? ಪೊಲೀಸರು ನಿಯಮಗಳ ಅನುಸಾರ ತನಿಖೆ ನಡೆಸುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. ನಟರಾಗಿ ಜವಬ್ದಾರಿಯುತವಾಗಿರಬೇಕು. ಚಾರಿಟಿ ಅಥಾವ ಇನ್ಯಾವುದೇ ಒಳ್ಳೆ ಮಾರ್ಗದ ಮೂಲಕ ಸಮಾಜಕ್ಕೆ ಉತ್ತಮವಾದದನ್ನು ನೀಡಬೇಕು ಎಂದು ಹೇಳಿದರು.