ಮೈಸೂರು: ಕರ್ನಾಟಕ ತಂಡದ ವೇಗಿ ವೈಶಾಖ ವಿಜಯಕುಮಾರ್ (45ಕ್ಕೆ3) ಹಾಗೂ ಎಡಗೈ ಸ್ಪಿನ್ನರ್ ಎ.ಸಿ. ರೋಹಿತ್ ಕುಮಾರ್ (66ಕ್ಕೆ 3) ಬೌಲಿಂಗ್ ದಾಳಿಗೆ ನಲುಗಿದ ಪ್ರವಾಸಿ ಗೋವಾ ತಂಡವು ಶುಕ್ರವಾರ ಇಲ್ಲಿ ಆರಂಭವಾದ ರಣಜಿ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆದರೆ ಸ್ನೇಹಲ್ ಕೌತಣಕರ್ ಅವರ ಅರ್ಧಶತಕದಿಂದಾಗಿ ಪ್ರವಾಸಿ ಬಳಗವು ದಿನದಾಟದ ಕೊನೆಗೆ ಸಾಧಾರಣ ಮೊತ್ತ ಗಳಿಸಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ 45 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡವು ಆತಂಕದಲ್ಲಿತ್ತು.
ಈ ಹಂತದಲ್ಲಿ ಕೌತಣಕರ್ (83; 193ಎ) ಅರ್ಧಶತಕದ ಬಲದಿಂದ 87 ಓವರ್ಗಳಲ್ಲಿ 8 ವಿಕೆಟ್ಗಳಿಗೆ 228 ರನ್ ಗಳಿಸಿತು. ಕ್ರೀಸ್ನಲ್ಲಿ ಅರ್ಜುನ್ ತೆಂಡೂಲ್ಕರ್ (ಬ್ಯಾಟಿಂಗ್ 10) ಹಾಗೂ ಹೇರಂಭ ಪರಬ್ (ಬ್ಯಾಟಿಂಗ್ 6) ಕ್ರೀಸ್ನಲ್ಲಿದ್ದಾರೆ.