ಸೂರ್ಯ ಎಂದರೆ ಹಿಂದುಗಳಿಗೆ ದೇವತೆಯಾದರೆ ವಿಜ್ಞಾನಿಗಳಿಗೆ ಶಕ್ತಿಯ ಪುಂಜವಾಗಿದ್ದಾನೆ. ಸೂರ್ಯನು ನಮಗೆ ತನ್ನ ಕಿರಣಗಳಿಂದ ಶಕ್ತಿಯನ್ನು ನೀಡುತ್ತಾನೆ. ಸೂರ್ಯನ ಆರಾಧನೆ ನಮಗೆ ಶಕ್ತಿಯನ್ನು ಆರೋಗ್ಯವನ್ನು ನೀಡುತ್ತದೆ. ಹಿಂದುಗಳಲ್ಲಿ ದಿನ ನಿತ್ಯವೂ ಸೂರ್ಯನ ಪೂಜೆಯನ್ನು ಮಾಡಲಾಗುತ್ತದೆ.
ದೇವರ ಪೂಜೆಗೆ ಮೊದಲು ಸಂಧ್ಯಾವಂದನೆಯನ್ನು ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡುವುದರಿಂದಲೇ ನಮ್ಮ ದಿನಚರಿ ಆರಂಭವಾಗುತ್ತದೆ. ಆದರೆ ಪ್ರತಿ ಮಾಸದಲ್ಲಿ ಒಂದೊಂದು ದೇವತೆಯ ವಿಶೇಷ ಆರಾಧನೆ ಇರುವಂತೆ ಮಕರ ರಾಶಿಯಲ್ಲಿ ಸೂರ್ಯನ ಪ್ರವೇಶದ ಮಕರ ಸಂಕ್ರಮಣ, ಮಾಘ ಮಾಸದ ರಥ ಸಪ್ತಮಿ ಚೈತ್ರ ಮಾಸದ ಭಾಸ್ಕರ ಸಪ್ತಮಿ , ಸೂರ್ಯ ಷಷ್ಠಿ ಮೊದಲಾದ ಪೂಜೆಗಳನ್ನು ಮಾಡುತ್ತಾರೆ.
ಸೂರ್ಯನು ಭೂಮಿಯ ಉತ್ತರ ಭಾಗದಲ್ಲಿರುವಾಗ ಭೂಮಿಯ ಮೇಲೆ ಹೆಚ್ಚು ಪ್ರಮಾಣದ ಶಾಖ ಭೂಮಿಯಲ್ಲಿ ಬಿದ್ದು ಜನರು ಆರೋಗ್ಯವಂತರು ಸಂತಸದಿಂದ ಇರುವವರು, ಬೆಳೆಗಳ ಬಿತ್ತನೆ ಎಲ್ಲವೂ ನಡೆದ ಕೆಲಸವು ಸುಗಮವಾಗಿ ಜನರು ಸಂಭ್ರಮದಿಂದ ಇರುವುದರಿಂದ. ತಮಗೆ ಶಕ್ತಿಯನ್ನು ಬೆಳೆಗಳನ್ನು ಬೆಳೆಯಲು, ಆರೋಗ್ಯವಂತರನ್ನಾಗಿ ಇಡುವ ಸೂರ್ಯನ ಆರಾಧನೆಯು ಬಹಳ ಮಹತ್ವವನ್ನು ಪಡೆಯುತ್ತದೆ.
ಮಾಘ ಮಾಸದ ಸೂರ್ಯನ ಪೂಜೆ ವಿಶೇಷವಾದ ಪೂಜೆ ಮತ್ತು ಮಹತ್ವವನ್ನು ಪಡೆಯುತ್ತದೆ. ಮಾಘ ಮಾಸದ ಶುದ್ಧ ಸಪ್ತಮಿ ರಥ ಸಪ್ತಮಿ ಎಂದು ಕರೆಯುತ್ತಾರೆ. ಆ ದಿನ ಸೂರ್ಯನು ತನ್ನ ರಥದಲ್ಲಿ ವಿರಾಜಮಾನನಾಗುತ್ತಾನೆ ಎಂದು ನಂಬಿಕೆ ಇದೆ. ರಥ ಸಪ್ತಮಿಯ ಪೂಜೆ ವಿಶೇಷವಾದುದು ಅನೇಕಾನೇಕ ವ್ರತಗಳನ್ನು ಅಂದಿನ ದಿನ ಮಾಡುತ್ತಾರೆ. ಮಂದಾರ ವ್ರತ, ಆರೋಗ್ಯ ಸಪ್ತಮಿವ್ರತ, ವಿಜಯ ಸಪ್ತಮಿ ವ್ರತ ಎಂಬ ಅನೇಕ ವ್ರತವನ್ನು ಆಚರಿಸಿ ಸೂರ್ಯ ನಾರಾಯಣ ದೇವನಿಂದ ಆಯುಷ್ಯ ಆರೋಗ್ಯ ಹಾಗೂ ಸಮೃದ್ಧಿಯನ್ನು ಪಡೆಯುತ್ತಾರೆ.
ಮಾಘ ಮಾಸದ ಸ್ನಾನವೇ ಬಹಳ ಶ್ರೇಷ್ಠವಾದುದು ಅದರಲ್ಲಿ ರಥ ಸಪ್ತಮಿಯ ದಿನ ಮುಂಜಾನೆ ಬೇಗ ಸ್ನಾನ ಮಾಡಿ ಸೂರ್ಯಾಘ್ಯ ಕೊಡುವುದು ಬಹಳ ಮಹತ್ವವನ್ನು ಹೊಂದಿದೆ. ನದೀ ತೀರ ಮತ್ತು ಪುಣ್ಯ ಕ್ಷೇತ್ರಗಳ ಸ್ನಾನಾದಿಗಳು ಫಲಪ್ರದವಾಗಿರುತ್ತದೆ. ರಥಸಪ್ತಮಿಯ ದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯ ನಾರಾಯಣನ ರಥದ ರಂಗೋಲಿ ಹಾಕಿ ಹೂವುಗಳಿಂದ ಅಲಂಕರಿಸಿ ಗೋಮದಿಂದ ಒಲೆಯನ್ನು ಮಾಡಿ ಅದರಲ್ಲಿ ಹಾಲು ಉಕ್ಕಿಸಿ ಸೂರ್ಯನಾರಾಯಣನಿಗೆ ನೈವೇದ್ಯ ಮಾಡಿ ಆರೋಗ್ಯ ಹಾಗೂ ಆಯುಷ್ಯದ ವರವನ್ನು ಬೇಡುತ್ತಾರೆ. ಇದು ಹಳ್ಳಿಗಳಲ್ಲಿ ಧಾರ್ಮಿಕ ಆಚರಣೆ ಮಾಡುವವರಲ್ಲಿ ಇದೆ.
ಈ ರೀತಿಯಲ್ಲಿ ಹಾಲು ಉಕ್ಕಿಸುವುದರಿಂದ ಮನೆಯಲ್ಲಿ ಲಕ್ಷ್ಮಿಯು ನೆಲೆಸಿ ಸಮೃದ್ಧಿಯನ್ನು ನೀಡುವಳು ಎಂಬ ನಂಬಿಕೆ ಇದೆ. ರಥ ಸಪ್ತಮಿ ದಿನದ ಮತ್ತೊಂದು ಆಚರಣೆಯೆಂದರೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡುವುದು. ಏಳು ಎಕ್ಕದ ಎಲೆಗಳನ್ನು ಬಳಸಿ ಮೈ ಉಜ್ಜಿಕೊಂಡು ಸ್ನಾನ ಮಾಡಿದರೆ ಚರ್ಮ ರೋಗಗಳು ನಾಶವಾಗುತ್ತದೆ. ರಥಸಪ್ತಮಿಯ ದಿನ ಕೂಷ್ಮಾಂಡ ದಾನವನ್ನು ಕೊಡುವುದು ವಾಡಿಕೆ ಮತ್ತು ಬಹಳ ಪುಣ್ಯಕರ. ಉತ್ತಮ ಸಂತಾನ ಹಾಗೂ ಸಂತಾನಕ್ಕೆ ಆಯುರ್ ಆರೋಗ್ಯ ಪ್ರಾಪ್ತಿಗಾಗಿ ಈಡೀ ಕುಂಬಳಕಾಯಿಯನ್ನು ದಾನ ಮಾಡುತ್ತಾರೆ.
ಕುಂಬಕಾಯಿಯು ಸುರಕ್ಷಿತವಾಗಿ ಬೀಜಗಳನ್ನು ಇಟ್ಟುಕೊಂಡು ಇರುವಂತೆ ತಾಯಿಯು ಮಗುವನ್ನು ಸುರಕ್ಷಿತವಾಗಿ ಇಟ್ಟು ಉತ್ತಮ ಸಂತಾನಕ್ಕೆ ಜನ್ಮ ಕೊಡಲಿ ಎಂಬುದು ಸೂಚ್ಯವಾಗಿದೆ.ಸೂರ್ಯಾರ್ಘ್ಯ ಹಾಗೂ ಸೂರ್ಯನ ಪೂಜೆಯಿಂದ ಅನೇಕ ಆರೋಗ್ಯದ ಸಮಸ್ಯೆಗಳ ಪರಿಹಾರವಾಗುತತದೆ. ಅದಕ್ಕಾಗಿಯೇ ಆದಿತ್ಯ ಹೃದಯದ ಪಾರಾಯಣವನ್ನು ಹೇಳಿರುತ್ತಾರೆ. ನೇತ್ರರೋಗವು ಈ ವ್ರತಾಚರಣೆಯಿಂದ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಮಾಧುರಿ ದೇಶಪಾಂಡೆ, ಬೆಂಗಳೂರು