This is the title of the web page
This is the title of the web page

ಆರ್ ಬಿ ಐ ರೆಪೋ ದರ ಹೆಚ್ಚಳ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿದೆ. ಪರಿಷ್ಕೃತ ರೆಪೋದರವೀಗ ಶೇ 6.50 ಆಗಿದೆ. ಸೋಮವಾರದಿಂದ ಆರಂಭಗೊಂಡಿದ್ದ ಹಣಕಾಸು ನೀತಿ ಸಮಿತಿಯ ಸಭೆ ಕೊನೆಗೊಂಡಿದ್ದು, ನಿರ್ಣಯಗಳನ್ನು ಗವರ್ನರ್ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಿದ್ದಾರೆ.

ಇದರೊಂದಿಗೆ, 2022ರ ಮೇ ತಿಂಗಳ ನಂತರ ಸತತವಾಗಿ ಆರ್‍ಬಿಐ ರೆಪೋ ದರ ಹೆಚ್ಚಿಸುತ್ತಾ ಬಂದಂತಾಗಿದೆ. ಕಳೆದ ಕೆಲವು ಹಣಕಾಸು ನೀತಿಗಳಲ್ಲಿ ನಿರಂತರವಾಗಿ ರೆಪೋದರ ಹೆಚ್ಚಿಸುತ್ತಾ ಬಂದಿರುವುದು ಪರಿಣಾಮ ಬೀರಿದೆ. ಅದರಿಂದಾಗಿ ಸಗಟು ಮತ್ತು ಚಿಲ್ಲರೆ ಹಣದುಬ್ಬರಗಳು ಸಹನೆಯ ಮಟ್ಟಕ್ಕೆ ಬಂದಿವೆ. ಆದಾಗ್ಯೂ ಜಾಗತಿಕ ಆರ್ಥಿಕ ಪರಿಸ್ಥಿತಿ, ಅಮೆರಿಕದ ಫೆಡರಲ್ ಬ್ಯಾಂಕ್ ಮತ್ತು ಇತರ ದೇಶಗಳ ಕೇಂದ್ರೀಯ ಬ್ಯಾಂಕ್‍ಗಳ ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಹಣದುಬ್ಬರದ ವಿಚಾರದಲ್ಲಿ ನಮ್ಮ ಗುರಿಯನ್ನು ತಲುಪುವುದಕ್ಕಾಗಿ ದರ ಹೆಚ್ಚಿಸುವುದು ಸದ್ಯದ ಮಟ್ಟಿಗೆ ಅನಿವಾರ್ಯವಾಗಿದೆ. ಹೀಗಾಗಿ ರೆಪೋದರ ಹೆಚ್ಚಿಸುತ್ತಿದ್ದೇವೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಸೂಕ್ಷ್ಮವಾಗಿ ನಿಗಾ ಇರಿಸುವುದನ್ನು ಆರ್‍ಬಿಐ ಮುಂದುವರಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟಾರೆ ಚಿಲ್ಲರೆ ಹಣದುಬ್ಬರ ಶೇ 5.6ರಷ್ಟು ಇರುವ ನಿರೀಕ್ಷೆ ಇದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಕಳೆದ ಮೂರು ವರ್ಷಗಳಲ್ಲಿ ಹಿಂದೆಂದೂ ನಡೆಯದಂಥ ಘಟನಾವಳಿಗಳು ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‍ಗಳ ಹಣಕಾಸು ನೀತಿಗಳನ್ನು ಪರೀಕ್ಷೆಗೆ ಒಳಪಡಿಸಿವೆ. ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಗಳು ಕಠಿಣ ಸವಾಲುಗಳನ್ನು ಎದುರಿಸುತ್ತಿವೆ. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆ ಹಣದುಬ್ಬರ ಏರಿಕೆ ತಡೆಯುವುದು ಕೇಂದ್ರೀಯ ಬ್ಯಾಂಕ್‍ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅವರು ತಿಳಿಸಿದ್ದಾರೆ.

2023-24ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ರಿಯಲ್ ಜಿಡಿಪಿ ಬೆಳವಣಿಗೆ ದರ ಶೇ 6.4ರಷ್ಟು ಇರಬಹುದು ಎಂದು ಹಣಕಾಸು ನೀತಿ ಸಮಿತಿ ಸಭೆ ಅಂದಾಜಿಸಿದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ 6.2, ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ 6 ಹಾಗೂ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ 5.8 ಇರಲಿದೆ ಎಂದು ಅಂದಾಜಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ವಿವರಿಸಿದ್ದಾರೆ.