ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ರನ್‍ಗಳಿಂದ ಸೋಲನುಭವಿಸಿತು. ತವರಿನ ಪಂದ್ಯವನ್ನು ಸೋತ ಬಳಿಕ ಮುಂದಿನ ಪಂದ್ಯವನ್ನು ಅವರು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 20ರಂದು ಗುರುವಾರ ಈ ಪಂದ್ಯ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವ 5 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸಿಎಸ್‍ಕೆ ವಿರುದ್ಧ ಪಂದ್ಯವನ್ನು ಗೆಲ್ಲುವ ಅವಕಾಶವಿದ್ದರೂ ಹಲವು ತಪ್ಪುಗಳನ್ನು ಮಾಡುವ ಮೂಲಕ ಗೆಲ್ಲುವ ಅವಕಾಶ ಕಳೆದುಕೊಂಡಿತು. ಆರ್ ಸಿಬಿ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕೆಂದರೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.
ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲಬೇಕೆಂದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಫಾರ್ಮ್ ಕಂಡುಕೊಳ್ಳಬೇಕಿದೆ. ದಿನೇಶ್ ಕಾರ್ತಿಕ್ ಈ ಬಾರಿ ಇನ್ನೂ ಪಂದ್ಯವನ್ನು ಗೆಲ್ಲಿಸುವಂತೆ ಬ್ಯಾಟಿಂಗ್ ಮಾಡಿಲ್ಲ, ಸಿಎಸ್‍ಕೆ ವಿರುದ್ಧ ಉತ್ತಮವಾಗಿ ಆಡುತ್ತಿದ್ದ ಅವರು ಔಟಾಗುವ ಮೂಲಕ ನಿರಾಸೆ ಮೂಡಿಸಿದರು, ಅನುಜ್ ರಾವತ್, ಮಹಿಪಾಲ್ ಲೊಮ್ರೊರ್, ಶಹಬಾಜ್ ಅಹ್ಮದ್ ಕೂಡ ಬ್ಯಾಟಿಂಗ್‍ನಲ್ಲಿ ಕೊಡುಗೆ ನೀಡಿಲ್ಲ.
ಬೌಲಿಂಗ್‍ನಲ್ಲಿ ಸುಧಾರಣೆ ಕಾಣಬೇಕು ತಂಡದ ಬೌಲಿಂಗ್ ವಿಭಾಗ ಪದೇ ಪದೇ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ಮೊಹಮ್ಮದ್ ಸಿರಾಜ್ ಹೊರತುಪಡಿಸಿ ಉಳಿದ ಬೌಲರ್ ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದಾರೆ. ವೈಶಾಕ್ ವಿಜಯ್ ಕುಮಾರ್ ಡೆಲ್ಲಿ ವಿರುದ್ಧ ಮೂರು ವಿಕೆಟ್ ಪಡೆದುಕೊಂಡರು, ಸಿಎಸ್‍ಕೆ ವಿರುದ್ಧ 62 ರನ್ ಬಿಟ್ಟುಕೊಟ್ಟರು. ಅನುಭವಿ ಬೌಲರ್ ಹರ್ಷಲ್ ಪಟೇಲ್ ಕೆಟ್ಟ ಬೌಲಿಂಗ್ ಮಾಡುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಮುಂದಿನ ಪಂದ್ಯದಲ್ಲಿ ಆರ್ ಸಿಬಿ ಕನಿಷ್ಠ ಬೇರೆ ವೇಗಿಗಳಿಗೆ ಅವಕಾಶ ನೀಡಬಹುದು. ಅವಿನಾಶ್ ಸಿಂಗ್, ಆಕಾಶ್ ದೀಪ್ ಅವರನ್ನು ಪ್ರಯತ್ನಿಸಬಹುದು.
Leave a Review