ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಮೊದಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ದೊಡ್ಡ ಪ್ರತಿಸ್ಪರ್ಧಿಗಳಾಗಿವೆ. ಎರಡೂ ತಂಡಗಳೂ ತಮ್ಮ ಹಿಂದೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು, ಇದೀಗ 2024ರ ಆವೃತ್ತಿಯಲ್ಲಿ ಮತ್ತೆ ಕಾದಾಟಕ್ಕೆ ಸಜ್ಜಾಗಿವೆ.
ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ಫಲಿತಾಂಶದ ಹೊರತಾಗಿಯೂ, ಎರಡೂ ತಂಡಗಳಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಸ್ಟಾರ್ ಆಟಗಾರರಿದ್ದಾರೆ.ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 25ನೇ ಹೈ-ವೋಲ್ಟೇಜ್ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಮತ್ತು ಪ್ರವಾಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕದನಕ್ಕೆ ಸಿದ್ಧವಾಗಿವೆ.
ಇದೇ ವೇಳೆ ಐಪಿಎಲ್ 2024ರ ಆವೃತ್ತಿಯು ಈವರೆಗೆ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ತಂಡಗಳಿಗೆ ಉತ್ತಮವಾಗಿಲ್ಲ.ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲು ಮತ್ತು ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 8ನೇ ಪಡೆದಿದ್ದರೆ, ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಮತ್ತು ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ.
ತಮ್ಮ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅದೇ ಆವೇಗವನ್ನು ಮುಂದುವರೆಸಲು ಎದುರು ನೋಡುತ್ತಿದೆ. ಬಿಗ್-ಹಿಟ್ಟರ್ ರೊಮಾರಿಯೋ ಶೆಫರ್ಡ್ ಅವರ ಬ್ಯಾಟಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಶಿಸ್ತಿನ ಬೌಲಿಂಗ್ ತಂಡದ ಶಕ್ತಿಯಾಗಿದೆ.