ರಾಯ್ಪುರ: ಪ್ರತಿಭಾನ್ವಿತ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ವೃತ್ತಿಪರ ಕ್ರಿಕೆಟ್ಗೆ ಭರ್ಜರಿ ಶತಕದೊಂದಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಛತ್ತೀಸ್ ಗಢ್ ವಿರುದ್ಧ ಗ್ರೂಪ್ ಬಿ ರಣಜಿ ಟ್ರೋಫಿ ಪಂದ್ಯದಲ್ಲಿ ಪೃಥ್ವಿ ಶಾ ಭರ್ಜರಿ ಶತಕ ಸಿಡಿಸಿದ್ದಾರೆ.
ಮುಂಬೈ ತಂಡದ ಪರ ಆಡುವ 24 ವರ್ಷದ ಶಾ ಪ್ರಥಮ ಇನ್ನಿಂಗ್ಸ್ ನಲ್ಲಿ 185 ಎಸೆತಗಳಲ್ಲಿ 159 ರನ್ ಬಾರಿಸಿದರು. ಇದರಲ್ಲಿ ಅವರು 18 ಬೌಂಡರಿ ಮತ್ತು ಮೂರು ಸಿಕ್ಸರ್ ಚಚ್ಚಿದರು. ಶಾ ಅವರು ಊಟದ ವಿರಾಮದ ಶತಕದ ಗಡಿ ದಾಟಿದರು. ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದ ಮೊದಲ ದಿನದಾಟದ ಆರಂಭಿಕ ಅವಧಿಯಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಭಾರತೀಯರಾದರು.
ಈ ಹಿಂದೆ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಅವರು 383 ಎಸೆತಗಳಲ್ಲಿ 379 ರನ್ ಗಳಿಸುವ ವೇಳೆ ಅಸ್ಸಾಂ ವಿರುದ್ಧ ಇದೇ ರೀತಿಯ ಸಾಧನೆಯನ್ನು ಮಾಡಿದ್ದರು. ಇದು ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರಣಜಿ ಟ್ರೋಫಿ ಸ್ಕೋರ್ ಆಗಿತ್ತು. ಭೂಪೇನ್ ಲಾಲ್ವಾನಿ ಜೊತೆಗಿನ ಶಾ ಅವರ ಜೊತೆಯಾಟವು 244 ರನ್ಗಳ ಬೃಹತ್ ಆರಂಭಿಕ ಜೊತೆಯಾಟವನ್ನು ನಿರ್ಮಿಸಿತು.
ಲಾಲ್ವಾನಿ 238 ಎಸೆತಗಳಲ್ಲಿ 102 ರನ್ ಗಳ ಕೊಡುಗೆ ನೀಡಿದರು.41 ಬಾರಿ ರಣಜಿ ಚಾಂಪಿಯನ್ ಮುಂಬೈ ತಂಡವು ದಿನದಾಟ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದೆ.