ಅಲಹಾಬಾದ್: ವಾರಾಣಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವ ವಿಚಾರದಲ್ಲಿ ಅಲಹಾಬಾದ್ ಹೈಕೋರ್ಟ್ನಲ್ಲಿ ಮುಸ್ಲಿಂ ಅರ್ಜಿದಾರರಿಗೆ ದೊಡ್ಡ ಹಿನ್ನಡೆಯಾಗಿದೆ. ಪೂಜೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಸ್ಲಿಂ ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಇದರೊಂದಿಗೆ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ, ವ್ಯಾಸ ಜಿ ಆರಾಧನೆ ಮುಂದುವರಿಯಲಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.ಹೈಕೋರ್ಟ್ನ ಈ ತೀರ್ಪಿನ ಪ್ರಕಾರ, ಜಿಲ್ಲಾ ನ್ಯಾಯಾಧೀಶರು ಜ್ಞಾನವಾಪಿ ಬಗ್ಗೆ ನೀಡಿದ ಆದೇಶ ಸದ್ಯಕ್ಕೆ ಹಾಗೆಯೇ ಮುಂದುವರಿಯಲಿದೆ.
ಮೊದಲ ಆದೇಶದಂತೆ ನೆಲಮಾಳಿಗೆಯಲ್ಲಿ ಪೂಜೆ ಮುಂದುವರಿಯಲಿದೆ. ಆದರೆ, ಈ ತೀರ್ಪಿನ ವಿರುದ್ಧ ಮುಸ್ಲಿಂ ಕಡೆಯವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದಾಗಿದೆ.ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ ಎಂದು ಅವರು ಹೇಳಿದ್ದಾರೆ.
ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ನೀಡುವುದನ್ನು ವಿರೋಧಿಸಿ ಮುಸ್ಲಿಂ ಕಡೆಯವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಫೆಬ್ರವರಿ 15 ರಂದು ಹೈಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು. ಎರಡೂ ಕಡೆಯ ವಾದ-ಪ್ರತಿವಾದದ ಬಳಿಕ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.