ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಮತ್ತೊಂದು ಯುವತಿ ಹತ್ಯೆ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.ಪ್ರೀತಿ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೋರ್ವ ಇಂದು ಬೆಳಗಿನ ಜಾವ ಮನಬಂದಂತೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ನಗರದ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ (20) ಹತ್ಯೆಯಾದ ಯುವತಿಯಾಗಿದ್ದು, ಈಕೆಗೆ ಅಲ್ಲಿನ ನಿವಾಸಿಯೇ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ (21) ಎಂಬಾತ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.ವಿಶ್ವನಾಥ ಕಳೆದ ಹಲವಾರು ದಿನಗಳಿಂದ ಅಂಜಲಿಯ ಹಿಂದೆ ಸುತ್ತುತ್ತಿದ್ದು ಪ್ರೀತಿಸು ಎಂದು ಪೀಡಿಸುತ್ತಿದ್ದನಂತೆ, ಆದರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ ಇಂದು ಬೆಳಂಬೆಳ್ಳಗ್ಗೆ ನಗರದ ವೀರಾಪುರ ಓಣಿಯಲ್ಲಿನ ಗುಡಿಓಣಿಯಲ್ಲಿನ ಅಂಜಲಿ ನಿವಾಸಕ್ಕೆ ಬೆಳಗಿನ ಜಾವ ಸುಮಾರು 5.30ಕ್ಕೆ ತೆರಳಿ ಮನೆಯ ಕದ ಬಡದಿದ್ದಾನೆ.
ನಂತರ ಅಂಜಲಿ ಹೊರಬಂದ ಅಕ್ಕನ ಜೊತೆಗೆ ಮಾತನಾಡುತ್ತಿದ್ದಾಗ ಕೂಡಲೇ ಏಕಾಏಕಿ ಅಂಜಲಿ ಕುತ್ತಿಗೆ, ಹೊಟ್ಟೆಗೆ ಮನಬಂದಂತೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ, ಆರೋಪಿಯ ಬಂಧನ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.ಘಟನಾ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ತೀವ್ರಗೊಂಡಿದೆ..
ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ ಆರೋಪಿ ಅಂಜಲಿಯನ್ನು ಪ್ರೀತಿ ವಿಚಾರವಾಗಿ ಪೀಡಿಸುತ್ತಿದ್ದ ಅಲ್ಲದೇ ನನ್ನ ಜೊತೆಗೆ ಮೈಸೂರಿಗೆ ಬರಲಿಲ್ಲವೆಂದರೇ ನೇಹಾ ಹಿರೇಮಠ ಮಾದರಿಯಲ್ಲಿಯೇ ನಿನ್ನ ಸ್ಥಿತಿ ಆಗುತ್ತದೆ ಎಂದು ಮೊದಲೆ ಬೆದರಿಕೆ ಹಾಕಿದ್ದ, ಈ ವಿಚಾರವನ್ನ ಪೊಲೀಸರಿಗೆ ಮೌಖಿಕವಾಗಿ ಕೊಲೆಯಾದ ಅಂಜಲಿಯ ಅಜ್ಜಿ ಹಾಗೂ ತಂಗಿ ತಿಳಿಸಿದಾಗ ಇವೆಲ್ಲಾ ಮೂಡನಂಬಿಕೆ ಎಂದು ಹೇಳಿ ಕಳಸಿದ್ದರು ಎಂದು ಮಾಧ್ಯಮದೊಂದಿಗೆ ಅವರ ತಂಗಿ ಮಾತನಾಡಿ ತಿಳಿಸಿದರು.
ಈಗ ಅಂಜಲಿ ಸಾವಾಗಿದೆ. ಆರೋಪಿಗೆ ಎನ್ಕೌಂಟರ್ ಮಾಡಬೇಕು ಎಂದು ಮೃತ ಅಂಜಲಿ ಸಹೋದರಿ ಮಾಧ್ಯಮದ ಮೂಲಕ ಒತ್ತಾಯಿಸಿದರಲ್ಲದೇ ನಮ್ಮ ಸಹೋದರಿಗೆ ಆದಂತಹ ಪರಿಸ್ಥಿತಿ ಯಾವ ಹೆಣ್ಣುಮಕ್ಕಳಿಗೂ ಬರಬಾರದು ಎಂದು ಅಂಜಲಿ ಕುಟುಂಬಸ್ಥರು ಆಕ್ರಂದಣ ವ್ಯಕ್ತಪಡಿಸಿದ್ದಾರೆ.