ಕಲ್ಪವೃಕ್ಷ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಜಯಮ್ಮ ಪದ್ಮರಾಜ್ ರವರ ಚೊಚ್ಚಲ ನಿರ್ಮಾಣದಲ್ಲಿ, ಮಂಜುನಾಥ್ ಜಯರಾಜ್ ತಮ್ಮ ಮೊದಲ ನಿರ್ದೇಶನದಲ್ಲಿ ತಾವೇ ನಾಯಕರಾಗಿ ಅಭಿನಯಿಸುತ್ತಿರುವ ಚಿತ್ರ “ದೈವ”. ನಿರ್ದೇಶಕ ರವಿಶ್ರೀವತ್ಸ ರವರ ಬಳಿ ಸಹ ನಿರ್ದೇಶಕನಾಗಿ ಮಂಜುನಾಥ್ ಕೆಲಸ ಮಾಡಿರುವ ಅನುಭವವಿದ್ದು, ಈಗ ತಾವೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರೊಂದಿಗೆ ನಿರ್ದೇಶನಕ್ಕೆ ಮುಂದಾಗಿದ್ದಾರೆ.
“ದೈವ” ಚಿತ್ರದ ನಟ, ನಿರ್ದೇಶಕ ಮಂಜುನಾಥ್ ಜಯರಾಜ್ ರವರ ಜನ್ಮದಿನದ ಪ್ರಯುಕ್ತ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಶುಭ ಕೋರಿದೆ. ಈ ಚಿತ್ರದಲ್ಲಿ ನಾಯಕ ಒಂದು ಸಮುದಾಯದ ಪ್ರತಿನಿಧಿಯಾಗಿ ತನ್ನ ಸಮಾಜಕ್ಕಾಗಿ ವಿಭಿನ್ನ ಶೈಲಿಯಲ್ಲಿ ಹೋರಾಡುವಂತ ಕಥಾ ಹಂದರವಿದ್ದು, “ಕಾಂತಾರ” ಚಿತ್ರದ ನಂತರ ಕೆಲವು ಸಮುದಾಯಗಳ ದೇವರ ಆರಾಧನೆಯ ಚಿತ್ರಗಳು ಸೆಟ್ಟೇರುತ್ತಿರುವುದು ವಿಶೇಷ ಎನ್ನಬಹುದು.
“ದೈವ” ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ನಾಯಕನಟ ಮಂಜುನಾಥ್ ಜಯರಾಜ್ ಎರಡು ಗೆಟಪ್ ಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿದಿದ್ದು ಶಿರಸಿ, ಮುಂಡಗೋಡು, ಯಲ್ಲಾಪುರ, ಗೋಕರ್ಣ ಸುತ್ತಮುತ್ತಾ ಚಿತ್ರೀಕರಣ ನಡೆದಿದೆ. ಚಿತ್ರತಂಡ ಚಿತ್ರೀಕರಣದ ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಶುರುಮಾಡಿ ಕೊಂಡಿದ್ದು. ಇನ್ನು ಎರಡು ಹಾಡುಗಳ ಮತ್ತು ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಮುಗಿದರೆ, ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತದೆ.
ಚಿತ್ರಕ್ಕೆ ವಿಜೇತ್ ಮಂಜಯ್ಯ ರವರ ಸಂಗೀತವಿದೆ, ಹೆಚ್.ಆರ್. ಸಿದ್ದಾರ್ಥ್ ರವರ ಛಾಯಾಗ್ರಹಣದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಕೆ.ಎಂ. ಪ್ರಕಾಶ್ ರವರ ಸಂಕಲನವಿದೆ.ಬಾಲ ರಾಜ್ವಾಡಿ, ಸುರಭಿ, ನಿಶ್ಚಿತಶೆಟ್ಟಿ ಮುಂತಾದವರ ತಾರಗಣ “ದೈವ” ಚಿತ್ರಕ್ಕಿದೆ.