ಜ್ಞಾನದೀಪಿಕ ಶೈಕ್ಷಣಿಕ ದತ್ತಿ ಯವರು ಹೊರತಂದಿರುವ, ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಡಾ. ಶ್ರೀಮತಿ ನಾಗಮಣಿ ಶ್ರೀನಾಥ್ ವಿರಚಿತ `ಅಂತರಾಳದ ಆಲಾಪನೆ’ ಯ ಲೋಕಾರ್ಪಣೆಯು ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಯದುಗಿರಿ ಯತಿರಾಜರು ಕರ್ನಾಟಕ ಸಂಗೀತ ಲೋಕಕ್ಕೆ ಶ್ರೀಮತಿ ನಾಗಮಣಿಯವರ ಕೊಡುಗೆಯನ್ನು ಶ್ಲಾಘಿಸಿದರು. ಈ ಪುಸ್ತಕವು ಸಾಧಕರಿಗೆ ಮತ್ತು ಯುವಜನತೆಗೆ ಒಂದು ದಾರಿ ದೀಪವಾಗಲಿದೆ ಎಂದು ಅಭಿಪ್ರಾಯಪಟ್ಟರು.ಶಿಕ್ಷಣ ತಜ್ಞ ಶ್ರೀ ಗುರುರಾಜ್ ಕರಜಗಿಯವರು ಮಾತನಾಡಿ, ಡಿವಿಜಿಯವರ `ಜ್ಞಾಪಕ ಚಿತ್ರಶಾಲೆ’ ಜೀವನ ಚರಿತ್ರೆಯ ಬಗ್ಗೆ ಹೇಗೆ ಬರೆಯಬೇಕು ಎಂಬುದಕ್ಕೆ ಮಾದರಿ. ಅದೇ ರೀತಿಯಲ್ಲಿ ನಾಗಮಣಿ ಶ್ರೀನಾಥ ರವರು ತಮ್ಮ `ಅಂತರಾಳದ ಆಲಾಪನೆ’ಯಲ್ಲಿ ಚಿತ್ರಿಸಿದ್ದಾರೆ.
ನಾಗಮಣಿಯವರು ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳದೆ, ತಾವು ಕಂಡಂತಹವರ, ಕೇಳಿದವರ ಬಗ್ಗೆ ಬರೆದಿದ್ದಾರೆ. ಸಾಧಕರ ಜೊತೆ ತಾವು ಹಾಕಿದ ಹೆಜ್ಜೆಯ ಬಗ್ಗೆ ಸ್ಮರಿಸಿದ್ದಾರೆ. ತಮ್ಮ 75 ವರುಷದ ಯಾನದಲ್ಲಿ ಸಹಾಯ ಹಸ್ತವನ್ನು ನೀಡಿದ ಎಲ್ಲರನ್ನೂ ಸ್ಮರಿಸಿದ್ದಾರೆ. ಈ ಪುಸ್ತಕವು ಸಂಗೀತ ಕ್ಷೇತ್ರದಲ್ಲಿ ಒಂದು ದೊಡ್ಡ ಸಾಂಸ್ಕೃತಿಕ ದಾಖಲೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಬ್ಬೂರು ಕಮ್ಮೆಸೇವಾ ಸಮಿತಿಯ ಅಧ್ಯಕ್ಷ ಡಾ. ಎ.ಬಿ. ಪ್ರಸನ್ನ, ಜ್ಞಾನದೀಪಿಕಾ ಶೈಕ್ಷಣಿಕ ದತ್ತಿಯ ಅಧ್ಯಕ್ಷರಾದ ಡಾ.ಎನ್.ಸತ್ಯಪ್ರಕಾಶ್ ಮತ್ತು ಕಾರ್ಯದರ್ಶಿಗಳಾದ ಶ್ರೀ ಎನ್ ಶಿವಮೂರ್ತಿ ಯವರು ಮಾತನಾಡಿದರು. ಶ್ರೀನಾಥ್ ಚಕ್ರವರ್ತಿ, ಜಿ.ಎನ್.ಅಚ್ಚುತರಾವ್, ಡಾ.ಟಿ.ಎಸ್.ಸತ್ಯವತಿ, ಶ್ರೀಮತಿ ಪುಸ್ತಕಂ ರಮಾ ಮತ್ತು ಅಶ್ವಿನಿ ಕೌಶಿಕ್ ರವರು ಕೃತಿಕಾರರ ಬಗ್ಗೆ ಮಾತನಾಡಿದರು.
ಕಾರ್ಯಕ್ರಮವು ಜಿ.ಎನ್.ರಾಮಚಂದ್ರರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀಮತಿ ರಮ್ಯಾ ವಿಶಿಷ್ಠ ರವರು ಸ್ವಾಗತಿಸಿದರು. ವಿದೂಷಿ ರೂಪಶ್ರೀ ಮಧುಸೂದನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ವಿಶಾಲಾಕ್ಷಿ ಮತ್ತು ಶ್ರೀಮತಿ ಲಕ್ಷೀಯವರು ವಂದಿಸಿದರು. ಪುಸ್ತಕ ಲೋಕಾರ್ಪಣೆಯ ಮೊದಲು ನಾಗಮಣಿ ಶ್ರೀನಾಥ್ ಶಿಷ್ಯವೃಂದದವರಿಂದ ಸಮೂಹ ಗಾನದ ಕಾರ್ಯಕ್ರಮವು ಜರುಗಿದವು.